ಪುತ್ತೂರು:
ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿದರೂ, ಕೆಲವು ಮೀಡಿಯಾಗಳು ಷಡ್ಯಂತ್ರ ರೂಪಿಸಿ ತನಿಖೆಯನ್ನು ಹಾಳುಮಾಡಲು ಯತ್ನಿಸುತ್ತಿವೆ ಎಂದು ಮಹೇಶ್ ಶೆಟ್ಟಿ ತಿಮೆರೋಡಿ ಆರೋಪಿಸಿದ್ದಾರೆ. “ಇದೆಲ್ಲಕ್ಕೂ ಉತ್ತರ ಮಹಾಲಿಂಗೇಶ್ವರ ದೇವರು ಮತ್ತು ಮಂಜುನಾಥ ಸ್ವಾಮಿ ನೀಡುತ್ತಾರೆ,” ಎಂದೂ ಅವರು ಹೇಳಿದರು.
ಹೈಕೋರ್ಟ್ ನಿರ್ದೇಶನದಂತೆ ಪುತ್ತೂರು ಎಸಿಯವರು ಪುನಃ ಗಡಿಪಾರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 8ರಂದು ಪುತ್ತೂರು ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮೆರೋಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತುಪ್ಪದ ದೀಪ ಹಾಗೂ ಎಳ್ಳೆಣ್ಣೆ ಸಮರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
“ಜಿಲ್ಲೆಯಿಂದ ಗಡಿಪಾರು ಮಾಡಲು ಸುಳ್ಳು ಆರೋಪಗಳನ್ನು ಹರಡಲಾಗಿದ್ದು, ಇದರ ಹಿಂದೆ ರಾಜಕೀಯ ಅಥವಾ ಕೆಲವು ಮೀಡಿಯಾ ವಲಯಗಳ ಷಡ್ಯಂತ್ರವಿದೆ,” ಎಂದು ಅವರು ಹೇಳಿದರು.




14 ವರ್ಷಗಳಿಂದ ಸೌಜನ್ಯ ಪರ ಹೋರಾಟ ಮಾಡುತ್ತಿದ್ದೇನೆಂದು ಹೇಳಿದ ಅವರು,
“ನಾನು ಮಾಡಿರುವ ಎಲ್ಲ ಆರೋಪಗಳಿಗೂ ದೇವರು ಸಾಕ್ಷಿ. ಅತ್ಯಾಚಾರ ನಡೆದಿರುವುದು, ದಲಿತರ ಭೂಮಿ ಒಳಗೆ ಹಾಕಿರುವುದು, ಬಡ್ಡಿ ವ್ಯವಹಾರ ನಡೆದಿರುವುದು ಸತ್ಯ. ಇದಕ್ಕೆ ಶಿಕ್ಷೆ ಆಗಲೇಬೇಕು,” ಎಂದು ಹೇಳಿದರು.
“ಸರ್ಕಾರದ ವ್ಯವಸ್ಥೆಯಲ್ಲಿ ನ್ಯಾಯ ಸಿಗದಿದ್ದರೂ, ಮಹಾಲಿಂಗೇಶ್ವರ ದೇವರು, ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ನ್ಯಾಯಾಲಯದಲ್ಲಿ ನ್ಯಾಯ ದೊರೆಯುತ್ತದೆ,” ಎಂದು ತಿಮೆರೋಡಿ ವಿಶ್ವಾಸ ವ್ಯಕ್ತಪಡಿಸಿದರು.



