ಪುತ್ತೂರು: ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಬೇಕು ಎಂದು ನಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ಸರಕಾರದ ಮುಂದೆ ಮನವಿ ಮಾಡಿದ್ದೆ, ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆದಿದೆ, ಹೊರ ರಾಜ್ಯಗಳಿಗೆ ಅಧ್ಯಯನ ಸಮಿತಿಯನ್ನು ಕಳುಹಿಸಲಾಗಿದೆ, ಘೋಷಣೆ ಮಾಡುವುದರಿಂದ ಸರಕಾರಕ್ಕೇನು ಆರ್ಥಿಕ ಹೊರೆಯಿಲ್ಲ . ಯಾಕೆ ಘೋಷಣೆಗೆ ಇಷ್ಟೊಂದು ತಡವಾಗುತ್ತಿದೆ? ಯಾವಾಗ ಘೋಷಣೆ ಮಾಡುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ನೇರ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಈ ವಿಚಾರದಲ್ಲಿ ನಾವು ವಿಶೇಷ ಕಾಳಜಿವಹಿಸಿದ್ದು ಮುಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.





ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ಅವರು ತುಳುವಿಗೆ ೩ ಸಾವಿರ ವರ್ಷಗಳ ಇತಿಹಾಸವಿದೆ, ಲಿಪಿ ಇದೆ, ಗೂಗಲ್‌ನಲ್ಲಿ ಕೂಡಾ ತುಳು ಭಾಷೆಯನ್ನು ಭಾಷಾಂತರ ಮಾಡಲು ಅವಕಾಶವಿದೆ,ಜರ್ಮನಿ ಮತ್ತು ಪ್ರಾನ್ಸ್‌ನಲ್ಲಿ ತುಳು ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ, ವಿಶ್ವ ವಿದ್ಯಾನಿಲಯಗಳಲ್ಲಿಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಎರಡು ಭಾಷೆಗಳನ್ನು ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ. ನಾನು ಶಾಸಕನಾಗಿ ಸದನಕ್ಕೆ ಬಂದಾಗ ಮೊದಲ ಪ್ರಶ್ನೆಯೇ ತುಳುವಿನ ಬಗ್ಗೆಯಾಗಿತ್ತು, ಆ ಬಳಿಕ ಎಲ್ಲಾ ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೇನೆ. ಸಚಿವ ಶಿವರಾಜ್ ತಂಗಡಗಡಿಯವರು ಈ ವಿಚಾರದಲ್ಲಿ ಸ್ವಲ್ಪ ಮುತುವರ್ಜಿ ವಹಿಸಿದ್ದಾರೆ. ಆಂದ್ರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಯಾವ ರೀತಿ ಅಲ್ಲಿನ ಸ್ಥಳೀಯ ಭಾಷೆಯನ್ನು ಹೆಚ್ಚುವರಿಯಾಗಿ ಘೋಷಣೆ ಮಾಡಿದ್ದಾರೆ ಎಂಬುದನ್ನೂ ಸಚಿವರು ಅಧ್ಯಯನ ತಂಡ ಕಳಿಸಿ ಅಧ್ಯಯನ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಯಾಕೆ ಅದನ್ನು ಘೋಷಣೆ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದರು.
ಅಶೋಕ್ ರಐ, ಯು ಟಿ ಖಾದರ್‌ರವರಿಗೆ ವಿಶೇಷ ಕಾಳಜಿ ಇದೆ: ಸಚಿವ ತಂಗಡಗಿ
ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿಸಬೇಕು ಎಂಬ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ರಐ ಹಾಗೂ ಸಭಾಧ್ಯಕ್ಷ ಯು ಟಿ ಖಾದರ್ ರವರು ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಅಧ್ಯಯನ ತಂಡವನ್ನು ಕಳುಹಿಸುವಲ್ಲಿ ಅಶೋಕ್ ರೈ ಪ್ರಮುಖ ಪಾತ್ರ ವಹಿಸಿದ್ದಾರೆ. ಆಂದ್ರದಲ್ಲಿ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ ಇದನ್ನು ಅಧ್ಯಯನ ಮಾಡಲು ತಂಢವನ್ನು ಕಳುಹಿಸಲಾಗಿದೆ. ತಂಡದ ವರದಿ ಸಿದ್ದಗೊಂಡ ಮೇಲೆ ಮುಖ್ಯಮಂತ್ರಿಗಳು, ವಿಧಾನಸಭಾ ಅಧ್ಯಕ್ಷರನ್ನೊಳಗೊಂಡ ಸಮಿತಿಯಲ್ಲಿ ಚರ್ಚೆ ಮಾಡಿ ಆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.


ಮೋಹನ ಆಳ್ವರ ವರದಿಯಲ್ಲಿ ಎಲ್ಲವೂ ಇದೆ; ವೇದವ್ಯಾಸ ಕಾಮತ್
ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಪುತ್ತೂರು ಶಾಸಕರು ವಿವರವಾಗಿ ಸಭೆಗೆ ತಿಳಿಸಿದ್ದಾರೆ. ಈಗಾಗಲೇ ಅಧ್ಯಯನ್ನಾಗಿ ಬೇರೆ ರಾಜ್ಯಗಳಿಗೆ ತಂಡವನ್ನು ಕಳುಹಿಸಲಾಗಿದೆ. ತಂಡ ವರದಿ ಮಾಡಲಿ ಆದರೆ ತುಳುವಿನ ಬಗ್ಗೆ ಡಾ. ಮೋಹನ್ ಆಳ್ವ ರವರು ಈಗಾಗಲೇ ಎಲ್ಲಾ ವಿಚಾರವನ್ನೊಳಗೊಂಡ ಅಧ್ಯಯನ ವರದಿಯನ್ನು ಸರಕಾರದ ಮುಂದೆ ಇಟ್ಟಿದ್ದಾರೆ ಅದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ಮಂಜೂರು ಮಾಡಿದರೆ ಆಯಿತು ಅದನ್ನು ಸರಕಾರ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ತುಳು ನಾಡಿನವರೇ ಸಚಿವರಾಗಿದ್ದಾಗ ಯಾಕೆ ಮಾಡಿಲ್ಲ: ಸಚಿವ ತಂಗಡಗಿ
ವೇದವ್ಯಾಸ ಕಾಮತ್‌ರವರು ಈ ಹಿಂದೆ ಶಾಸಕರಾಗಿದ್ದಾಗ ತುಳು ನಾಡಿನವರೇ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು ಆವಾಗ ಇದೇ ವೇದವ್ಯಾಸ ಕಾಮತ್ ಸಭೆಗೆ ಅಥವಾ ಸರಕಾರಕ್ಕೆ ಒತ್ತಾಯ ಮಾಡಬಹುದಿತ್ತು ಆಗ ಅವರು ಮಾತನಾಡಲೇ ಇಲ್ಲ. ಆದರೂ ನಾನು ಈ ವಿಚಾರದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಕ್ರಮಕೈಗೊಳ್ಳುವೆ ಎಂದು ಸಚಿವರು ಹೇಳಿದರು.
ತುಳು ಅಪ್ಪೆ ಭಾಷೆ ಸಭಾಧ್ಯಕ್ಷರೆ..
ತುಳು ನಮ್ಮ ನಾಡಿನ ಅಪ್ಪೆ ಭಾಷೆಯಾಗಿದೆ. ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಲೇಬೇಕು ಎಂಬ ಹೋರಾಟ ನಿಲ್ಲುವುದಿಲ್ಲ. ಜಿಲ್ಲೆಯ ೧೩ ಶಾಸಕರು ಒಟ್ಟಾಗಿ ಹೋರಾಟ ಮಾಡಿದರೆ ಇದೇನು ಕಷ್ಟದ ವಿಚಾರವಲ್ಲ. ಮುಂದಿನ ದಿನ ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು ಅಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ್ ರೈ ಮತ್ತೆ ಮನವಿ ಮಾಡಿದರು.


