

ಪುತ್ತೂರು : ಶ್ರಮ, ಶಕ್ತಿ ಮತ್ತು ಉತ್ಸಾಹವಿದ್ದರೆ ಯಾವುದೇ ಅಧಮ್ಯ ಗುರಿಯನ್ನೂ ಸಾಧಿಸಬಹುದು. ಇದಕ್ಕೆ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವೇ ಅತ್ಯುತ್ತಮ ಉದಾಹರಣೆ ಎಂದು ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು.
ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಐವತ್ತು ವರ್ಷಗಳ ಹಿಂದೆ ಹಿರಿಯರು ಹಾಕಿದ ಅಡಿಪಾಯವನ್ನು ಹಾಲಿ ಬಲಿಷ್ಠ ಅಧ್ಯಕ್ಷೆ ಗೌರಿ ಬನ್ನೂರು ಅವರು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಸಂಘ ನೂರಾರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲೂ ಶಾಖೆಗಳನ್ನು ತೆರೆಯುವ ಮೂಲಕ ಈ ಯಶಸ್ಸು ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಆಶಿಸಿದರು.



ಸಹಕಾರಿ ಧ್ವಜಾರೋಹಣ ನೆರವೇರಿಸಿದ ದಕ್ಷಿಣ ಕನ್ನಡ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಮಹಿಳೆಯರಿಗೆ ಅವಕಾಶಗಳು ಕಡಿಮೆಯಾಗಿದ್ದ ಕಾಲದಲ್ಲಿ 50 ವರ್ಷಗಳ ಹಿಂದೆ ಕಾಲ್ನಡಿಗೆಯಲ್ಲಿ ಶೇರುಗಳನ್ನು ಸಂಗ್ರಹಿಸಿ ಸಂಘವನ್ನು ಕಟ್ಟಿದ ಮಹಿಳೆಯರ ಸಾಧನೆ ಶ್ಲಾಘನೀಯ. ಇಂದು ಉಭಯ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಮಹಿಳಾ ಸಹಕಾರಿ ಸಂಘವೆಂದು ಗುರುತಿಸಿಕೊಂಡು 100ರಲ್ಲಿ 94 ಶೇಕಡಾ ಅಂಕ ಗಳಿಸಿರುವುದು ಹೆಮ್ಮೆಯ ವಿಷಯ ಎಂದರು. ಸಹಕಾರಿ ಕ್ಷೇತ್ರ ಪವಿತ್ರ ವ್ಯವಸ್ಥೆಯಾಗಿದ್ದು, ಯುವಜನತೆ ಇದರಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.



ಧನಾದೇಶ ವಿತರಣೆ ನೆರವೇರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, 2025ನೇ ವರ್ಷ ಹಲವು ಐತಿಹಾಸಿಕ ಕಾರಣಗಳಿಂದ ವಿಶೇಷವಾಗಿದ್ದು, ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ, ವಂದೇ ಮಾತರಂಗೆ 150 ವರ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ದಿ, ವಾಜಪೇಯಿ 100ನೇ ಜನ್ಮದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಸಹಕಾರ ವರ್ಷವೆಂದೂ ಗುರುತಿಸಿಕೊಂಡಿದೆ ಎಂದರು. ಸರಕಾರ ಮಾಡಲಾಗದ ಅನೇಕ ಕಾರ್ಯಗಳನ್ನು ಸಹಕಾರಿ ಕ್ಷೇತ್ರ ಮಾಡಿದೆ. ಸ್ವಾಭಿಮಾನಿ, ಸ್ವಾವಲಂಬಿ ಬದುಕು ಕಟ್ಟುವ ಕೆಲಸ ಸಹಕಾರಿ ಸಂಘಗಳಿಂದ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಛಾಪು ಮೂಡಿಸಿರುವುದಕ್ಕೆ ಪುತ್ತೂರು ಮಹಿಳಾ ಸಹಕಾರಿ ಸಂಘವೇ ಉದಾಹರಣೆ ಎಂದರು.


ಸಹಕಾರ ಜ್ಯೋತಿ ಸ್ವಸಹಾಯ ಸಂಘಗಳಿಗೆ ಸಂಘದ ಪುಸ್ತಕ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು ಎಂಬುದಕ್ಕೆ ಪುತ್ತೂರು ಮಹಿಳಾ ಸಹಕಾರಿ ಸಂಘ ದೊಡ್ಡ ಮಟ್ಟದಲ್ಲಿ ಆರ್ಥಿಕ ವ್ಯವಹಾರ ನಡೆಸುತ್ತಿರುವುದೇ ಸಾಕ್ಷಿ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದರೆ ಕುಟುಂಬ ಹಾಗೂ ಸಮಾಜದ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಈ ಕಾರಣದಿಂದ ಸರ್ಕಾರವೂ ಮಹಿಳೆಯರ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ 32 ವರ್ಷಗಳ ಕಾಲ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮನೋಹರ್ ಕೆ.ವಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುವರ್ಣ ಮಹೋತ್ಸವದ ಅಂಗವಾಗಿ ಒಂದು ಲಕ್ಷ ರೂ. ಠೇವಣಿಗೆ 10.25 ಶೇಕಡಾ ಬಡ್ಡಿ ನೀಡುವ ಒಂದು ವರ್ಷದ ವಿಶೇಷ ಯೋಜನೆಗೆ ಚಾಲನೆ ನೀಡಲಾಯಿತು. ಸಂಘದ ಸದಸ್ಯೆ ಪವಿತ್ರಾ ಅವರಿಗೆ ವಾಹನ ಖರೀದಿಗೆ ಚೆಕ್ ವಿತರಿಸಲಾಯಿತು. ವಿಶೇಷಚೇತನ ಗೀತಾ ಅವರಿಗೆ ಹಾಗೂ ರೇವತಿ ಮತ್ತು ಸಫಿಯಾ ಅವರಿಗೆ ಧನಾದೇಶ ವಿತರಣೆ ಮಾಡಲಾಯಿತು.


