ಸುಬ್ರಹ್ಮಣ್ಯ: ಚಿಕಿತ್ಸೆಗಾಗಿ ಯೆನೆಕಲ್ಲಿಗೆ ಬಂದಿದ್ದ ವೃದ್ಧರೊಬ್ಬರು ಹಠಾತ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಮಂಗಳೂರು ತಾಲೂಕಿನ ತೋಕೂರು ಗ್ರಾಮದ ನಿವಾಸಿ ಕರಿಯಪ್ಪ ಸಾಲ್ಯಾನ್ (77) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಮನೆ ಬಿಟ್ಟು ಬಜ್ಪೆಯ ಆಶ್ರಮವೊಂದರಲ್ಲಿ ವಾಸವಾಗಿದ್ದರು.


ಕರಿಯಪ್ಪ ಸಾಲ್ಯಾನ್ ಅವರು ಸೊಂಟ ಮತ್ತು ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕಾಲಕಾಲಕ್ಕೆ ಸುಬ್ರಹ್ಮಣ್ಯ ಸಮೀಪದ ಯೆನೆಕಲ್ಲಿನ ಶ್ರೀನಿವಾಸ ಎಂಬುವವರ ಮನೆಗೆ ಬರುತ್ತಿದ್ದರು. ಅದರಂತೆ ಜನೆವರಿ 23ರಂದು ಅವರು ಶ್ರೀನಿವಾಸರವರ ಮನೆಯಲ್ಲಿದ್ದಾಗ, ಮಧ್ಯರಾತ್ರಿ ಸುಮಾರು 12:30 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.


ತಕ್ಷಣ ಅವರನ್ನು 108 ಅಂಬುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ಮೃತರ ಪುತ್ರ ಹರೀಶ್ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ UDR ನಂಬ್ರ: 03/2026, ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.





