ಕಡಬ : ವ್ಯಕ್ತಿಯೋರ್ವರ ಮೃತದೇಹ ಕಡಬ – ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ ಸಮೀಪದ ಪತ್ತೆಯಾಗಿದ್ದು, ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ಷಣ್ಮುಗನಾಥನ್ (65) ಮೃತರು. ಬಿಳಿನೆಲೆ ಗ್ರಾಮದ ಯುಗರಾಜ ಎಂಬವರ ತಾಯಿಯ ಚಿಕ್ಕಮ್ಮನ ಮಗನಾದ ಷಣ್ಮುಗನಾಥನ್ ಅವರು ಆಗಾಗ ಯುಗರಾಜ ಅವರ ಮನೆಗೆ ಬರುತ್ತಿದ್ದು, ಮೂರು ವರ್ಷಗಳ ಹಿಂದೆ ಬಂದವರು ತಮಿಳುನಾಡಿಗೆ ಹೋಗದೇ ಬಿಳಿನೆಲೆ ಗ್ರಾಮದ ನೆಟ್ಟಣ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಮದ್ಯ ಸೇವಿಸಿ ಅಲ್ಲೇ ಅಂಗಡಿ ಬದಿಯಲ್ಲಿ ಮಲಗುತ್ತಿದ್ದರು.

ಷಣ್ಮುಗನಾಥನ್ ನ.7ರಂದು ನೆಟ್ಟಣ ಪೇಟೆಯಲ್ಲಿದ್ದರು, ನ.8ರಂದು ಷಣ್ಮುಗನಾಥನ್ ಅವರು ನೆಟ್ಟಣ ರೈಲ್ವೇ ಓವರ್ ಬ್ರಿಡ್ಜ್ ಬಳಿ ಡಾಮಾರು ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿತ್ತು, ಪರಿಶೀಲನೆ ವೇಳೆ ಮೃತಪಟ್ಟಿರುವುದು ಗೊತ್ತಾಗಿದೆ. ಷಣ್ಮುಗನಾಥನ್ ಅವರಿಗೆ ಬೆನ್ನಿಗೆ, ಸೊಂಟದ ಬಳಿ ತರಚಿತ ಗಾಯ, ತಲೆಯ ಬಲ ಬದಿ ಗಾಯಗಳಾಗಿರುವುದು ಕಂಡುಬಂದಿದೆ. ರಾತ್ರಿ ಸಮಯ ಬಿದ್ದು ಗಾಯಗೊಂಡು ಅಥವಾ ಯಾವುದೋ ಅಪಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.


