ಪುತ್ತೂರು: ಮಾವಿನ ಹಣ್ಣಿನ ಸೀಸನ್ ಆರಂಭಗೊಳ್ಳುವ ಮೊದಲೇ ಮಾವಿನ ಮಿಡಿಗಳು ಗ್ರಾಹಕರನ್ನು ಆಕರ್ಷಿಸಲು ಆರಂಭಿಸಿವೆ. ಅದರಲ್ಲೂ ಉಪ್ಪಿನಕಾಯಿ ಹಾಕಲೆಂದೇ ಇರುವ ಕೆಲವು ಮಾವಿನ ಮಿಡಿಗಳಿದ್ದು, ಈ ಮಿಡಿಗಳಿಗೆ ಇದೀಗ ಭಾರೀ ಬೇಡಿಕೆಯೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾವಿನ ಉಪ್ಪಿನಕಾಯಿ ಹಾಕಲೆಂದೇ ಇರುವ ವಿವಿಧ ವೆರೈಟಿಯ ಮಾವಿನ ತಳಿಗಳಿದ್ದು, ಇವುಗಳನ್ನು ಖರೀದಿಸಲು ಮಂಗಳೂರು, ಮಡಿಕೇರಿ, ಮೈಸೂರು ಭಾಗದ ಜನರೂ ಪುತ್ತೂರಿನ ಕೆಲವು ಆಯ್ದ ಮಾರಾಟಗಾರರಲ್ಲಿಗೆ ಬರುತ್ತಾರೆ. ಪುತ್ತೂರಿನ ಸುದಾನ ಶಾಲೆಯ ಮುಂಭಾಗದಲ್ಲಿ ವಿವಿಧ ರೀತಿಯ ಮಾವಿನ ಮಿಡಿಗಳನ್ನು ಮಾರಾಟ ಮಾಡುವ ತಂಡವೊಂದಿದ್ದು, ಕಳೆದ 15 ವರ್ಷಗಳಿಂದ ಮಾವಿನ ಮಿಡಿಯಲ್ಲೇ ಇವರು ಎಕ್ಸ್ ಪರ್ಟ್ ಆಗಿದ್ದಾರೆ.

ಉಪ್ಪಿನಕಾಯಿ ಹಾಕಲು ಅತ್ಯಂತ ಬೆಸ್ಟ್ ಮಾವಿನ ಕಾಯಿಯೆಂದರೆ ಅದು ಕರಾವಳಿಯಲ್ಲಿ ಅಪ್ಪೆಮಿಡಿ ಎಂದು ಕರೆಯಲ್ಪಡುವ ಜಾತಿಯ ಮಾವಿನ ಕಾಯಿಯಾಗಿದೆ. ಈ ಅಪ್ಪೆಮಿಡಿ ಮಾವಿನಕಾಯಿಗಳು ಸಾಮಾನ್ಯವಾಗಿ ಸಾಗರ,ಶಿವಮೊಗ್ಗ ಭಾಗದಿಂದ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದರೆ, ಜಿಲ್ಲೆಯಲ್ಲೇ ಬೆಳೆಯುವ ಕೆಲವು ಕಾಟು ಮಾವಿನಕಾಯಿಗಳು, ಜೀರಿಗೆ ಮಾವಿನಕಾಯಿ ಹೀಗೆ ಹಲವು ತರಹದ ಮಾವಿನಕಾಯಿಗಳು ಜಿಲ್ಲೆಯಲ್ಲಿ ಲಭ್ಯವಿದೆ. ರುಚಿ ಹಾಗು ಬಾಳಿಕೆಯ ಗುಣಮಟ್ಟವನ್ನು ನೋಡಿಕೊಂಡು ಈ ಮಾವಿನ ಮಿಡಿಗಳಿಗೆ ದರ ಫಿಕ್ಸ್ ಆಗುತ್ತೆ




ಕಾಡು ಮಾವಿನಕಾಯಿಗಳಿಗೆ ಕಿಲೋವೊಂದಕ್ಕೆ 150 ರಿಂದ 200. ರೂಪಾಯಿಗಳಿದ್ದರೆ, ಜೀರಿಗೆ ಮಾವಿನಕಾಯಿಗೆ 200 ರಿಂದ 250 ರೂಪಾಯಿ ತನಕ ದರವಿದೆ. ಕೆಲವು ಮಾವಿನ ತಳಿಗಳು ಹಣ್ಣಾದರೆ ರುಚಿಕರವಾಗಿರುವುದಿಲ್ಲ ಎನ್ನುವ ಕಾರಣಕ್ಕೆ ಮಿಡಿಯಲ್ಲೇ ಮಾವಿನಕಾಯಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕಲು ಈ ಮಾವಿನಕಾಯಿಗಳನ್ನು ಬಳಸಲಾಗುತ್ತದೆ. ಜೀರಿಗೆ ಮಾವಿನಕಾಯಿ ಖರೀದಿಸುವ ಒಂದು ವರ್ಗವೇ ಇದ್ದರೆ, ಕಾಡು ಮಾವಿನಕಾಯಿಗಳನ್ನೇ ಅರಸಿ ಬರುವ ಇನ್ನೊಂದು ವರ್ಗವೂ ಇದೆ. ಸ್ಥಳೀಯವಾಗಿ ತೋಟಗಳಲ್ಲಿ ಬೆಳೆಯುವ ಮಾವಿನ ಮರದಿಂದ ಈ ಮಾವಿನಕಾಯಿಗಳನ್ನು ಕೊಯ್ದು ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ರುಚಿಗೆ ತಕ್ಕಂತ ಮಾವಿನಕಾಯಿಗಳ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಸುದಾನ ಶಾಲೆಯ ಪಕ್ಕದಲ್ಲಿ ಮಾವಿನಕಾಯಿಗಳ ಮಾರಾಟ ಮಾಡುತ್ತಿರುವ ಬಪ್ಪಳಿಗೆಯ ಹಂಝ. ಪುತ್ತೂರು ತಾಲೂಕಿನಾದ್ಯಂತ ಈ ಹಿಂದೆ ರಸ್ತೆ ಪಕ್ಕದಲ್ಲಿ ಇರುವ ಮಾವಿನ ಮರಗಳನ್ನು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯ ಅನುಮತಿಯ ಮೇರೆಗೆ ಇವುಗಳ ಅಧೀನದಲ್ಲಿ ಬರುವ ಮಾವಿನ ಮರಗಳಿಂದ ಕಾಯಿಗಳನ್ನು ಕೀಳುವ ಪ್ರಕ್ರಿಯೆ ಈ ಹಿಂದೆ ಇತ್ತಾದರೂ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯ ಹಿನ್ನಲೆಯಲ್ಲಿ ರಸ್ತೆ ಬದಿಯ ಮಾವಿನ ಮರಗಳಿಂದ ಮಾವಿನಕಾಯಿಗಳನ್ನು ತೆಗೆಯುವ ಪ್ರಕ್ರಿಯೆ ಸದ್ಯ ನಿಂತಿದ್ದು, ಖಾಸಗಿ ಭೂಮಿಗಳಿಂದಲೇ ಕಾಯಿ ಸಂಗ್ರಹಿಸಿ ಮಾವಿನ ಮಿಡಿ ಮಾರಾಟಗಾರರು ತನ್ನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ.



