ಏನೇಕಲ್ಲು: ಸ್ಥಳೀಯವಾಗಿ ಪರಿಚಿತವಾಗಿದ್ದ ಮಾಗನೆ ಗೌಡರ ಕುಟುಂಬದ ಸದಸ್ಯ ಮನೋಜ್ (42) ಅವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಇಂದು ಮುಂಜಾನೆ ಏನೇಕಲ್ಲು ಗ್ರಾಮದಲ್ಲಿ ನಡೆದಿದೆ.
ದಿವಂಗತ ಆನಂದ ಗೌಡರ ಪುತ್ರನಾದ ಮನೋಜ್ ಅವರು, ಏನೇಕಲ್ಲು ಗ್ರಾಮದ ಬಾನಡ್ಕ ನಿವಾಸಿಯಾಗಿದ್ದು, ತಮ್ಮ ಮನೆಯ ಮೇಲ್ಚಾವಣಿಯ ಪಕ್ಕಾಸಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮನೋಜ್ ಅವರು ಏನೇಕಲ್ಲು ಶ್ರೀ ಶಂಕಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಉಳ್ಳಾಕುಳು ಉಳ್ಳಾಲ್ತಿ ಮತ್ತು ಬಚ್ಚನಾಯಕ ದೇವಸ್ಥಾನಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮನೋಜ್ ಅವರು ಕೆಲಕಾಲದಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಮನಸ್ತಾಪದಿಂದ ಈ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ತಿಳಿದುಬಂದಿದೆ.

ಮೃತರು ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *