ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ ಮಾತ್ರ ಆಚರಿಸಲಾಗುವ ಈ ಸಿರಿಜಾತ್ರೆಗೆ ತನ್ನದೇ ಆದ ಮಹತ್ವವಿದೆ. ತುಳುವರು ತಮ್ಮ ಕುಲದೇವರಿಗೆ, ಆರಾಧ್ಯ ದೈವಕ್ಕೆ ಹರಕೆ ಸಲ್ಲಿಸುವುದು ಸಿರಿ ಜಾತ್ರೆಯ ವಿಶಿಷ್ಟತೆಯೂ ಹೌದು.

ಈ ಜಾತ್ರೆ ನಡೆಯುವ ಸ್ಥಳಗಳನ್ನು ಆಲಡೆ ಎಂದು ಕರೆಯಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು,ಈ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರ ಮಹೋತ್ಸವ, ಸಿರಿ ಜಾತ್ರೆಯ ಸಂಭ್ರಮ,
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹಸಿರು ಕಾನನಗಳ ಮಧ್ಯೆ ಕಂಗೊಳಿಸುತ್ತಿರುವ ಈ ಪುಣ್ಯಕ್ಷೇತ್ರ ಇದೀಗ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಅಜೀರ್ಣಾವಸ್ಥೆಯಲ್ಲಿ ಈ ದೇವಾಲಯವನ್ನು ನಾಲ್ಕು ವರ್ಷಗಳ ಹಿಂದೆ ಊರ– ಪರವೂರ ಭಕ್ತರ ಸಹಕಾರದಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಶಿಲಾಮಯವಾಗಿ ನವೀಕರಿಸಲಾಗಿದೆ. ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಪುರಾತನ ದೇವಾಲಯ ಕಾರಣಿಕದ ಕ್ಷೇತ್ರವೂ ಹೌದು.

ಕ್ಷೇತ್ರದಲ್ಲಿ ಉಮಾಮಹೇಶ್ವರ ಪ್ರಧಾನ ದೇವರಾಗಿ, ಬ್ರಹ್ಮಲಿಂಗೇಶ್ವರ ಉಪದೇವರಾಗಿ ಸಾನ್ನಿಧ್ಯವಿದೆ. ಅಲ್ಲದೆ, ನಾಗಬ್ರಹ್ಮ, ರಕ್ತೇಶ್ವರಿ, ನಂದಿ, ಕ್ಷೇತ್ರಪಾಲರನ್ನು ಒಳಗೊಂಡ ಪಂಚಸಾನ್ನಿಧ್ಯವು ಇಲ್ಲಿದೆ. ಜತೆಗೆ ಸಿರಿಕುಮಾರ, ಅಬ್ಬಗ ದಾರಗ, ನಂದಿಗೋಣ ಮುಂತಾದ ಶಕ್ತಿಗಳು ಒಂದೇ ಕ್ಷೇತ್ರದಲ್ಲಿ ನೆಲೆಯಾಗಿರುವುದು ಮತ್ತೊಂದು ವಿಶೇಷ.ನಾಡಿನ ಸಾವಿರಾರು ಕುಟುಂಬಗಳಿಗೆ ಆಲಡೆ ಕ್ಷೇತ್ರವಾಗಿರುವ ಈ ದೇಗುಲಕ್ಕೆ ಭಕ್ತರು ಹರಕೆ ಹೊತ್ತು ಬಂದರೆ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸಿಗುತ್ತದೆ ಎಂಬ ಪ್ರತೀತಿಯಿದೆ. ಈಗಾಗಲೇ ನೂರಾರು ಭಕ್ತರು ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ವಿವಾಹ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಆಲಡೆಯ ಸಂಬಂಧ ಹೊಂದಿರುವ ಕುಟುಂಬಗಳು ಕ್ಷೇತ್ರಕ್ಕೆ ಬಂದು ಹುರುಳಿ ಹಾಗೂ ಇತರೆ ಧಾನ್ಯವನ್ನು ಹರಕೆಯ ರೂಪದಲ್ಲಿ ಸಲ್ಲಿಸಿ, ತಮ್ಮ ಕಷ್ಟ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಲ್ಲಿ ನಡೆಯುವ ಸಿರಿಗಳ ಜಾತ್ರೆ, ಕುಮಾರದರ್ಶನಕ್ಕೆ ನೋಡಲು ದಕ್ಷಿಣ ಕನ್ನಡ, ಉಡುಪಿ, ಕೇರಳ ಮತ್ತಿತರ ಕಡೆಗಳಿಂದ ಬರುತ್ತಿರುವುದು ಕ್ಷೇತ್ರದ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ.

Leave a Reply

Your email address will not be published. Required fields are marked *