ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಇದರ ಜೊತೆಗೆ 300 ಹಾಸಿಗೆಗಳ ಸರಕಾರಿ ಆಸ್ಪತ್ರೆಯೂ ನಿರ್ಮಾಣವಾಗಲಿದೆ. ಆದರೆ ಕೆಲವು ಬಿಜೆಪಿ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು “ಮೊಸರಲ್ಲಿ ಕಲ್ಲು ಹುಡುಕುವ” ಕೆಲಸ ಮಾಡುತ್ತಿದ್ದಾರೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸಾಮಾಜಿಕ ಮುಂದಾಳು ಎ. ಜತೀಂದ್ರ ಶೆಟ್ಟಿ ಅಳಿಮರ ಹಾಗೂ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.




ಮೆಡಿಕಲ್ ಕಾಲೇಜು ಕುರಿತು ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಪುತ್ತೂರಿನ ಜನರ ದೀರ್ಘಕಾಲದ ಕನಸು ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ನನಸಾಗುತ್ತಿದೆ ಎಂದು ಅವರು ಹೇಳಿದರು. ಇದರೊಂದಿಗೆ 300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲಿ ಆರಂಭಿಸಲು ಸರ್ಕಾರ ಮುಂದಾಗಿದೆ. ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಪೇಟೆ ಪ್ರದೇಶವನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
2016ರಲ್ಲಿ ಆಗಿನ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ 40 ಎಕರೆ ಜಾಗವನ್ನು ಮೆಡಿಕಲ್ ಕಾಲೇಜಿಗೆ ನಿಗದಿ ಮಾಡಲಾಗಿತ್ತು. ನಂತರ ಬಂದ ಶಾಸಕ ಸಂಜೀವ ಮಠಂದೂರು ಅವರು ಅದನ್ನು ಸೀ ಫುಡ್ ತಯಾರಿಕಾ ಘಟಕ ಮಾಡಲು ಪ್ರಯತ್ನಿಸಿದರೂ, ಸಾರ್ವಜನಿಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿದ್ದರು. ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ಕನಸಿಗೆ ಪುನರ್ಜನ್ಮ ನೀಡುವ ಕೆಲಸ ಮಾಡಿದರು. ಆದರೆ ಈಗ ಕೆಲವರು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಪುತ್ತೂರಿನ ಅಭಿವೃದ್ಧಿಯನ್ನು ಸಹಿಸದ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾಮಾಜಿಕ ಮುಂದಾಳು ಎ. ಜತೀಂದ್ರ ಶೆಟ್ಟಿ ಅಳಿಮರ ಮಾತನಾಡಿ, ವಿಶ್ವವಿದ್ಯಾನಿಲಯ ಕೋಣಾಜೆಯಲ್ಲಿ ಆರಂಭವಾಗುವ ಸಂದರ್ಭದಲ್ಲಿಯೂ ವಿರೋಧ ವ್ಯಕ್ತವಾಗಿತ್ತು. ಆದರೆ ನಂತರ ಅದು ಅಭಿವೃದ್ಧಿಗೆ ಕಾರಣವಾಯಿತು. ಅದೇ ರೀತಿ ಪುತ್ತೂರು ಅಭಿವೃದ್ಧಿಯಾಗಬೇಕಾದರೆ ವಿಸ್ತರಣೆ ಅಗತ್ಯವಿದ್ದು, ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.



ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಮಾತನಾಡಿ, 300 ಹಾಸಿಗೆಗಳ ಆಸ್ಪತ್ರೆಗೆ ಕನಿಷ್ಠ 8 ಎಕರೆ ಜಾಗ ಅಗತ್ಯವಿದೆ ಎಂದು ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಹೊಸ ನಿಯಮಗಳ ಪ್ರಕಾರ ಮೆಡಿಕಲ್ ಕಾಲೇಜಿಗೆ ಕನಿಷ್ಠ 8 ಎಕರೆ ಜಾಗ ಬೇಕಾಗುತ್ತದೆ. ಹಾಲಿ ಸರಕಾರಿ ಆಸ್ಪತ್ರೆಯ ಜಾಗ ಕೇವಲ 5.16 ಎಕರೆ ಮಾತ್ರ ಇದ್ದು, ಅದು ಆಸ್ಪತ್ರೆಯ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.
ಆಸ್ಪತ್ರೆ ನಿರ್ಮಾಣವಾಗಬೇಕಾದರೆ ವಿಶಾಲ ಪಾರ್ಕಿಂಗ್, ಆಂಬುಲೆನ್ಸ್ಗಳಿಗೆ ಸರಾಗ ಸಂಚಾರದ ರಸ್ತೆಗಳು ಸೇರಿದಂತೆ ಹಲವು ಸೌಲಭ್ಯಗಳು ಅಗತ್ಯ. ಈ ಎಲ್ಲ ಸೌಲಭ್ಯಗಳನ್ನು ಸೇಡಿಯಾಪಿನಲ್ಲಿ ಒದಗಿಸಲು ಸಾಧ್ಯವಿದೆ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಣ್ಣು ಪರೀಕ್ಷೆ ನಡೆಸಿದ್ದು, ಡ್ರೋನ್ ಸರ್ವೆ ಕೂಡ ನಡೆದಿದೆ. ಕಟ್ಟಡದ ಪ್ರಾಥಮಿಕ ವಿನ್ಯಾಸ ಕೂಡ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್ ಉಪಸ್ಥಿತರಿದ್ದರು.

