ಉಪ್ಪಿನಂಗಡಿ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಬೆಳೆಸಿ ಮದುವೆಯ ಭರವಸೆ ನೀಡಿ ಯುವತಿಯ ಖಾಸಗಿ ವಿಡಿಯೋ ಪಡೆದು ಅದನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಯುವಕ ಮತ್ತು ಆತನ ಸಹೋದರಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಪೊಲೀಸರ ಮಾಹಿತಿ ಪ್ರಕಾರ, ಬೆಳ್ತಂಗಡಿ ತಾಲೂಕಿನ ಕನಿಯೂರು ಗ್ರಾಮದ 20 ವರ್ಷದ ಯುವತಿ, ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಸುಮಾರು ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಸುಮಂತು ಪೂಜಾರಿ ಎಂಬಾತನ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗುವುದಾಗಿ ಇಬ್ಬರೂ ನಿರ್ಧರಿಸಿದ್ದರು ಎನ್ನಲಾಗಿದೆ.



ಈ ನಡುವೆ, ಆರೋಪಿತನು ಯುವತಿಯನ್ನು ವಿಡಿಯೋ ಕಾಲ್ ಮಾಡಲು ಒತ್ತಾಯಿಸಿದ್ದು, ಮದುವೆಯ ಭರವಸೆ ನೀಡಿದ ಹಿನ್ನೆಲೆ ಆತನ ಮೇಲೆ ನಂಬಿಕೆ ಇಟ್ಟು ಯುವತಿ ವಿಡಿಯೋ ಕಾಲ್‌ನಲ್ಲಿ ಭಾಗವಹಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಆ ವಿಡಿಯೋವನ್ನು ದುರುಪಯೋಗಪಡಿಸಿಕೊಂಡು ವಾಟ್ಸಪ್ ಮೂಲಕ ಹಂಚಿದ ಆರೋಪವಿದ್ದು, ಈ ಕೃತ್ಯಕ್ಕೆ ಆರೋಪಿಯ ಸಹೋದರಿಯೂ ಸಹಕರಿಸಿದ್ದಾಳೆ ಎಂದು ಹೇಳಲಾಗಿದೆ.
ಈ ಘಟನೆ 01-10-2025 ರಿಂದ 16-03-2026ರ ಅವಧಿಯಲ್ಲಿ ನಡೆದಿದ್ದು, ವಿಷಯವು ಯುವತಿಗೆ 16-03-2026ರಂದು ತಿಳಿದುಬಂದಿದೆ. ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಬಳಿಕ 24-03-2026ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೂರು ಆಧರಿಸಿ ಉಪ್ಪಿನಂಗಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 318(3), 316(3), 3(5), ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(E), 67(A) ಸೇರಿದಂತೆ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣವು ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡುವಂತಾಗಿದೆ.

