ಮನೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವು
ಪುತ್ತೂರು: ನೆರೆಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿ ಕೇವಲ ಅರ್ಧ ಗಂಟೆಯೊಳಗೆ ಮನೆಗೆ ವಾಪಸ್ಸಾದಾಗ, ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಶಿಬರ ಸಮೀಪ ಡಿಸೆಂಬರ್ 13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಶುಭರಾತ್ರಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಾಹಿದ್ ಎಂಬುವವರ ಮನೆಯಲ್ಲಿ ಸಂಭವಿಸಿದೆ. ಶಾಹಿದ್ ಅವರು ಬೆಂಗಳೂರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಅವರ ಪತ್ನಿ ಫಝೀಲಾ ಪಿ, ಮಕ್ಕಳು ಹಾಗೂ ತಾಯಿ ವಾಸ್ತವ್ಯವಿದ್ದಾರೆ. ಡಿಸೆಂಬರ್ 13ರಂದು ರಾತ್ರಿ ಸುಮಾರು 9 ಗಂಟೆಗೆ ನೆರೆಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಹಾಕಿ ಅಲ್ಲಿಗೆ ತೆರಳಿದ್ದರು.




ರಾತ್ರಿ ಸುಮಾರು 9.30ರ ವೇಳೆಗೆ ಮನೆಗೆ ವಾಪಸ್ಸಾದಾಗ, ಪತ್ನಿ ಮತ್ತು ಅತ್ತೆ ಮಲಗುವ ಕೋಣೆಯಲ್ಲಿನ ಕಪಾಟು ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಪರಿಶೀಲನೆ ನಡೆಸಿದ ವೇಳೆ ಗೋಡ್ರೆಜ್‌ನಲ್ಲಿ ಇಡಲಾಗಿದ್ದ ಸುಮಾರು ರೂ. 1.25 ಲಕ್ಷ ಮೌಲ್ಯದ ಚಿನ್ನಾಭರಣ, ರೂ. 22,000 ನಗದು ಹಾಗೂ ಒಂದು ಗ್ರಾಂ ಚಿನ್ನ ಕಳವಾಗಿರುವುದು ತಿಳಿದುಬಂದಿದೆ.
ಯಾರೋ ಅಪರಿಚಿತ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ ಕಳ್ಳತನ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಫಝೀಲಾ ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




