ಅಂಗಾರಕ ಸಂಕಷ್ಟಿ ವಿಶೇಷ ವೃತಾಚರಣೆ ದೇವಳಕ್ಕೆ ಹರಿದು ಬಂದ ಭಕ್ತಸಾಗರ.

ಪುತ್ತೂರು:ಇತಿಹಾಸ ಪ್ರಸಿದ್ದ ಸೀಮಾಧಿಪತಿ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿತ್ಯ ಆರಾಧಿಸಲ್ಪಡುವ ಮಹಾಗಣಪತಿಗೆ ಲೋಕಕಲ್ಯಾಣಾರ್ಥವಾಗಿ 108 ಕಾಯಿ ಗಣಪತಿ ಹೋಮ, ಮಹಾರಂಗ ಪೂಜೆ, ಮೂಡಪ್ಪ ಸೇವೆ ಏಳು ವರ್ಷಗಳ ಬಳಿಕ ಜ.6ರಂದು ನಡೆಯಿತು.

ದೇವಳದ ತಂತ್ರಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಸದಸ್ಯರ ಉಪಸ್ಥಿತಿಯಲ್ಲಿ ಬೆಳಗ್ಗಿನಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿ, ಸಂಜೆಮಹಾರಂಗಪೂಜೆಯಾಗಿ ರಾತ್ರಿ ಮೂಡಪ್ಪ ಸೇವೆ ನಡೆಯಿತು. ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ ದಿನ ನಡೆದ ಮೂಡಪ್ಪ ಸೇವೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.ಬೆಳಗ್ಗಿನಿಂದ ರಾತ್ರಿಯ ತನಕ ಗಣಪತಿ ಗುಡಿಗೆ ಪ್ರದಕ್ಷಿಣೆ ಬರುತ್ತಿರುವುದು ವಿಶೇಷವಾಗಿತ್ತು.

ಬೆಳಿಗ್ಗೆ ವೇ.ಮೂ.ಜಯರಾಮ ಜೋಯಿಷ ಅವರ ವೈದಿಕತ್ವದಲ್ಲಿ 108 ಕಾಯಿ ಗಣಪತಿ ಹೋಮ, ಅರ್ಚಕ ರಾಜೇಶ್ ಭಟ್ ಅವರು ಮಂಡಲದಲ್ಲಿ ಗಣಪತಿಗೆ ಪೂಜೆ ನೆರವೇರಿಸಿದರು.ಶ್ರೀ ಬಾಲಗಣಪತಿಗೆ ಋತ್ವಿಜರಿಂದ ಅಥರ್ವಶೀರ್ಷ ಪಾರಾಯಣ ಪುರಸ್ಪರ ಎಳನೀರು, ಪಂಚಾಮೃತ, ಶುದ್ಧ ಜಲಾಭಿಷೇಕ ಮತ್ತು ಪ್ರರ್ಥಾಕಲಶಾಭಿಷೇಕವನ್ನು ಅರ್ಚಕ ಉದಯ ಭಟ್ ಅವರು ನೆರವೇರಿಸಿದರು. ಮಧ್ಯಾಹ್ನ 108 ಕಾಯಿ ಗಣಪತಿ ಹೋಮದ ಪೂರ್ಣಾಹುತಿಯ ಬಳಿಕ ಶ್ರೀ ಮಹಾಲಿಂಗೇಶ್ವರ ದೇವರಿಗೆ ದೇವಳದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಅವರಿಂದ ಮಹಾಪೂಜೆ ನಡೆಯಿತು.ಸಂಜೆ ಸಂಕಲ್ಪ ಪುರಸ್ಪರವಾಗಿ ಬ್ರಹ್ಮಶ್ರೀ ವೇ.ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮಹಾರಂಗಪೂಜೆ ನಡೆಯಿತು.ಗಣಪತಿ ದೇವರಿಗೆ 108 ಅಗೇಲು ಹಾಕಿ ಸೇವೆ ನಡೆಯಿತು.ಬಳಿಕ ಗಣಪತಿ ಗರ್ಭಗುಡಿಯಲ್ಲಿ ದೇವರ ಸುತ್ತ ಕಬ್ಬಿನ ಜಲ್ಲೆಯಿಂದ ಬೇಲಿ ನಿರ್ಮಿಸಿ ಮೂಡಪ್ಪವನ್ನು ಗಣಪತಿ ದೇವರ ನಾಸಿಕದವರೆಗೆ ಸಮರ್ಪಣೆ ಮಾಡಿ, ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ಕವಾಟಬಂಧನ ಮಾಡಲಾಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಭಕ್ತರಿಗೆ ಸಂಕಲ್ಪ ಕಾರ್ಯ ನೆರವೇರಿಸಿದರು.

ಮಹಾಗಣಪತಿಗೆ ಮೂಡಪ್ಪ ಸಮರ್ಪಣೆ ಮಾಡಲು ಗಣಪತಿ ದೇವರ ವಿಗ್ರಹದ ಸುತ್ತ ಬೇಲಿ ರೂಪದಲ್ಲಿ ಕಬ್ಬನ್ನು ಇಟ್ಟು ಅದರ ಮಧ್ಯೆ ಅಪ್ಪ ಸಮರ್ಪಣೆ ಮಾಡಲಾಯಿತು.ಬಳಿಕ ಬೆಳ್ಳಿಯ ಕವಚದಿಂದ ಎದುರು ಶೃಂಗರಿಸಲಾಯಿತು.ಅಪ್ಪವನ್ನು ದೇವಳದ ನೈವೇದ್ಯ ಕೋಣೆಯ ಬಳಿಯೇ ತಯಾರಿಸಲಾಯಿತು.

ಮಹಾರಂಗಪೂಜೆ, ಮೂಡಪ್ಪ ಸೇವೆ ಮಾಡಿಸಿದ ಭಕ್ತರಿಗೆ ಸಂಕಲ್ಪದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು.ಮೂವರು ಅರ್ಚಕರು ಸಂಕಲ್ಪ ಸೇವೆಯನ್ನು ನೆರವೇರಿಸಿದರು.ಮಹಾರಂಗಪೂಜೆಗೆ ಗಣಪತಿ ದೇವರ ಗುಡಿಯ ಎದುರು ಇಡಲಾಗಿದ್ದ ಅಗೇಲು ವ್ಯವಸ್ಥೆಯ ಕೊನೆಯಲ್ಲಿ ಸಂಕಲ್ಪವನ್ನು ದೇವಳದ ಪ್ರಧಾನ ಅರ್ಚಕ ಎ.ವಸಂತ ಕುಮಾರ ಕೆದಿಲಾಯ ಅವರು ನೆರವೇರಿಸಿದರು.ಮಹಾರಂಗಪೂಜೆ ಸೇವಾರ್ಥಿಗಳಿಗೆ ತುಪ್ಪದ ದೀಪ ಹಚ್ಚುವ ಅವಕಾಶ ಕಲ್ಪಿಸಿ ಬಳಿಕ ಸಂಕಲ್ಪ ಮಾಡಲಾಯಿತು.ದೇವಳದ ಗೋಪುರದಲ್ಲಿ ಮೂಡಪ್ಪ ಸೇವೆ ಸಂಕಲ್ಪ ಮತ್ತು ಸಂಜೆ ಬೆಳಗ್ಗಿನ ಮಹಾಗಣಪತಿ ಹೋಮ ಪ್ರಸಾದ ವಿತರಣೆ ನಡೆಯಿತು.ರಾತ್ರಿ ಮಹಾರಂಗಪೂಜೆಯ ಪ್ರಸಾದ ವಿತರಣೆ ನಡೆಯಿತು.ದೇವಳದ ಅರ್ಚಕರು, ಪರಿಚಾರಕರು, ನಿತ್ಯ ಕರಸೇವಕರು ಜೊತೆಯಾಗಿ ವೈದಿಕರಿಗೆ ಮತ್ತು ವ್ಯವಸ್ಥೆಯ ದೃಷ್ಟಿಯಲ್ಲಿ ತಕ್ಷಣ ಸ್ಪಂದಿಸಿ ಸಹಕಾರ ನೀಡುತ್ತಿದ್ದರು.ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಮೂಡಪ್ಪ ಸೇವೆಯ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಕ್ತ ಸಮೂಹ ಗಣಪತಿಗುಡಿಯ ಬಳಿ ಸೇರಿದ್ದರು.ಅಂಗಾರಕ ಸಂಕಷ್ಟಿಯಾದ್ದರಿಂದ ಗಣಪತಿ ಗುಡಿಗೆ ನಿರಂತರ ಪ್ರದಕ್ಷಿಣ ಹಾಕುತ್ತಿದ್ದರು.ಗಣಪತಿ ಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.ಸಂಜೆಯೂ ಭಕ್ತರ ಸಂಖ್ಯೆ ಅಧಿಕವಾಗಿತ್ತು.ದೇವಳದ ಒಳಾಂಗಣದಲ್ಲಿ ಶ್ರೀ ದುರ್ಗಾ ಗುಡಿಯ ಬಳಿ ಭಜನಾ ಕಾರ್ಯಕ್ರಮ ನಡೆಯಿತು. ಎಲ್.ಇ.ಡಿ. ಟಿ.ವಿ ಅಳವಡಿಸಿ ಮೂಡಪ್ಪ ಸೇವಾ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿತ್ತು.ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.ಸುಮಾರು 5 ಸಾವಿರದಷ್ಟು ಮೂಡಪ್ಪ ಸೇವೆ, 200 ಮಹಾರಂಗಪೂಜೆ, 250ರಷ್ಟು 108 ಕಾಯಿ ಗಣಪತಿ ಹೋಮ ಸೇವೆಯನ್ನು ಭಕ್ತರು ಮಾಡಿಸಿದರು.

ಮೂಡಪ್ಪ ಸೇವೆಯ ಪ್ರಸಾದವನ್ನು ಇಂದು ವಿತರಣೆ ಮಾಡಲಾಗುತ್ತಿದೆ.ಬೆಳಿಗ್ಗೆ ಗಂಟೆ 4ಕ್ಕೆ ದೇವಳದ ಬಾಗಿಲು ತೆರೆದು ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿಯ ಬಾಗಿಲು ಮುಹೂರ್ತ ಆದ ಬಳಿಕ ಗಂಟೆ 4.15ಕ್ಕೆ ಸರಿಯಾಗಿ ಶ್ರೀ ಮಹಾಗಣಪತಿಯ ಮೂಡಪ್ಪ ಕವಾಟ ಬಂಧವನ್ನು ವಾದ್ಯಘೋಷದೊಂದಿಗೆ ತೆರೆಯಲಾಗಿದೆ.ಮೂಡಪ್ಪ
ಸೇವೆಯ ಪ್ರಸಾದವನ್ನು ಪ್ಯಾಕ್ ಮಾಡಿದ ಬಳಿಕ ಬೆಳಿಗ್ಗೆ ಗಂಟೆ 7ರಿಂದ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.ಸಂಜೆಯ ತನಕ ಪ್ರಸಾದ ವಿತರಣೆ ನಡೆಯಲಿದೆ.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್‌ ಪಿ.ವಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಕಾರಿ ಕೆ.ವಿ.ಶ್ರೀನಿವಾಸ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಹಿರಿಯರಾದ ಕಿಟ್ಟಣ್ಣ ಗೌಡ, ಉದ್ಯಮಿ ಶಿವಪ್ರಸಾದ್ ರೈ, ನ್ಯಾಯವಾದಿ ಮಹೇಶ್ ಕಜೆ, ಮಾಜಿ ಮೊಕೇಸರ ಚಿದಾನಂದ ಬೈಲಾಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖ‌ರ್ ನಾರಾವಿ, ರಾಮದಾಸ್ ಗೌಡ, ಬಿ.ಕೆ.ವೀಣಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *