ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರಿನ ಪುರಭವನದಲ್ಲಿ 2022 ಹಾಗೂ 2023ನೇ ಸಾಲಿನ ಬ್ಯಾರಿ ಅಕಾಡೆಮಿಯ ಗೌರವ ಪುರಸ್ಕಾರ ಪ್ರದಾನ ಹಾಗೂ ಬ್ಯಾರಿ ವಿದ್ಯಾರ್ಥಿ ಸಂಗಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,December 7.ರಂದು ಬೆಳಿಗ್ಗೆ 10 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಉದ್ಘಾಟನೆಯ ನಂತರ ಮಹಿಳೆಯರಿಗೆ ಸಾಂಪ್ರದಾಯಿಕ ಆಹಾರ ಹಾಗೂ ಮೆಹಂದಿ ವಿನ್ಯಾಸ ಸ್ಪರ್ಧೆ, ಮಕ್ಕಳಿಗಾಗಿ ಬ್ಯಾರಿಹಾಡು ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಕ್ವಿಜ್ ಸ್ಪರ್ಧೆಗಳು ನಡೆಯಲಿವೆ.
ಮಧ್ಯಾಹ್ನ 2 ಗಂಟೆಗೆ ನಡೆಯುವ ವಿದ್ಯಾರ್ಥಿ ಸಂಗಮದಲ್ಲಿ ಯುವಜನತೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳು ಎಂಬ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಲಿದ್ದು, ನ್ಯಾ. ಎಂ. ಸಿದ್ದೀಕ್, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ಹಾಗೂ ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಹನೀಫ್ ಭಾಗವಹಿಸಲಿದ್ದಾರೆ.




ಬ್ಯಾರಿ ಕವಿಗೋಷ್ಠಿಯಲ್ಲಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆ ವಹಿಸಲಿದ್ದು, ಸಫ್ವಾನ್ ಸವಣೂರು, ಮುಹಮ್ಮದ್ ಶರೀಫ್ ನಿರ್ಮುಂಜೆ, ರಹ್ಮತ್ ಪುತ್ತೂರು, ಅಶ್ರಫ್ ಅಪೋಲೊ, ಸಿಂಸಾರುಲ್ ಹಕ್ ಆರ್ಲಪದವು, ಆಯಿಷಾ ಪೆರ್ನೆ, ಸಲೀಂ ಮಾಣಿ ಮತ್ತು ಯಂಶ್ ಬೇಂಗಿಲ ಕವನ ವಾಚನ ಮಾಡಲಿದ್ದಾರೆ.
ಗೌರವ ಪುರಸ್ಕಾರ ಪ್ರದಾನ
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಚಮ್ಮನ ಗೌರವ ಪ್ರಶಸ್ತಿಗಳನ್ನು ಹೀಗಿರುವವರಿಗೆ ಪ್ರದಾನ ಮಾಡಲಾಗಲಿದೆ:
ಅಬ್ದುಲ್ ಸಮದ್ ಬಾವಾ (ಸಾಹಿತ್ಯ)
ಅನ್ಸಾರ್ ಇನೋಳಿ (ಭಾಷೆ)
ರಶೀದ್ ನಂದಾವರ (ಕಲೆ-ಸಂಸ್ಕೃತಿ)
ನಝ್ಮತ್ತುನ್ನೀಸಾ ಲೈಝ್ (ಸಾಹಿತ್ಯ)
ಮಹಮ್ಮದ್ ಆಲಿ ಬಡ್ಡೂರು (ಕಲೆ-ಸಂಸ್ಕೃತಿ)
ಟಿ.ಎಂ. ಶಹೀದ್ (ಸಂಘಟನೆ)
ಯಂ.ಪಿ. ಬಷೀರ್ ಅಹ್ಮದ್ (ಸಾಹಿತ್ಯ)
ಯಾಸೀರ್ ಕಲ್ಲಡ್ಕ (ಸಂಸ್ಕೃತಿ)
ಮಲ್ಲಿಕಾ ಶೆಟ್ಟಿ (ಕಲೆ-ಸಂಸ್ಕೃತಿ)
ಸೈಫ್ ಕುತ್ತಾರ್ (ಭಾಷೆ
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿಗಳನ್ನು ಪ್ರದಾನಿಸಲಿದ್ದು, ಪುತ್ತೂರು ಶಾಸಕ ಅಶೋಕ್ ರೈ ಅಕಾಡೆಮಿಯ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ಕೆ.ಪಿ., ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಸೇರಿದಂತೆ ಗಣ್ಯರು ಹಾಜರಿರಲಿದ್ದಾರೆ. ದಫ್ ಹಾಡು ಹಾಗೂ ಬ್ಯಾರಿಹಾಡುಗಳ ಸಾಂಸ್ಕೃತಿಕ ಸಂಭ್ರಮವೂ ಕಾರ್ಯಕ್ರಮದ ವೈಶಿಷ್ಟ್ಯವಾಗಲಿದೆ.
ಗೋಷ್ಟಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಅಬೂಬಕ್ಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ, ಸಂಘಟನಾ ಕಾರ್ಯದರ್ಶಿ ಕೆ.ಎಂ. ಸಿದ್ದೀಕ್ ಹಾಗೂ ಕಾರ್ಯದರ್ಶಿ ವಿ.ಕೆ. ಶರೀಫ್ ಬಪ್ಪಳಿಗೆ ಉಪಸ್ಥಿತರಿದ್ದರು.



