ಪುತ್ತೂರು: ಪುತ್ತೂರು ಹೊರವಲಯದ ಆನೆಮಜಲು ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪುತ್ತೂರು ನ್ಯಾಯಾಲಯ ಸಂಕೀರ್ಣದ ಉದ್ಘಾಟನಾ ಸಮಾರಂಭವು ಜ.31ರಂದು ಶನಿವಾರ ನಡೆಯಲಿದೆ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಸವರಾಜ್ ಅವರು ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಂಗ ದಕ್ಷಿಣ ಕನ್ನಡ, ಲೋಕೋಪಯೋಗಿ ಇಲಾಖೆ ದಕ್ಷಿಣ ಕನ್ನಡ ಹಾಗೂ ಪುತ್ತೂರು ವಕೀಲರ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪೂರ್ವಾಹ್ನ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಆಂಧ್ರಪ್ರದೇಶದ ರಾಜ್ಯಪಾಲರು ಹಾಗೂ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎಸ್. ಅಬ್ದಲ್ ನಜೀರ್ ಅವರು ಉದ್ಘಾಟಿಸಲಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಖಬ್ರು ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳೂ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ನ್ಯಾ.ಮೂ. ಎಚ್.ಟಿ. ನರೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಅಶೋಕ್ ಎಸ್. ಕಿಣಗಿ, ಎಸ್. ವಿಶ್ವಜಿತ್ ಶೆಟ್ಟಿ, ಕೆ. ರಾಜೇಶ್ ರೈ, ತ್ಯಾಗರಾಜ್ ಎನ್. ಇನವಳ್ಳಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅತಿಥಿಗಳಾಗಿರುತ್ತಾರೆ. ಅಲ್ಲದೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಟಿ.ಜಿ. ಶಿವಶಂಕರೇ ಗೌಡ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಅಶೋಕ್ ರೈ, ಸುಪ್ರೀಂ ಕೋರ್ಟ್ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತ್ ಕುಮಾರ್, ರಾಜ್ಯ ಸರ್ಕಾರದ ಎಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.




ಈಗಿರುವ ನ್ಯಾಯಾಲಯದಲ್ಲಿ ಜಾಗದ ಕೊರತೆ ಇರುವ ಕಾರಣ ನೂತನ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಅಪರಾಹ್ನ 2.45ಕ್ಕೆ ನ್ಯಾಯಾಲಯಗಳ ಕಲಾಪ ಹೊಸ ನ್ಯಾಯಾಲಯ ಕಟ್ಟಡದಲ್ಲೇ ಆರಂಭಗೊಳ್ಳಲಿದ್ದು, ಅಗತ್ಯ ದಾಖಲೆಗಳ ಸ್ಥಳಾಂತರ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.


೭ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರು
ಪುತ್ತೂರಿಗೆ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಲಾಗಿದ್ದು, ಅದು ನೂತನ ನ್ಯಾಯಾಲಯ ಸಂಕೀರ್ಣದಲ್ಲೇ ಕಾರ್ಯಾರಂಭಿಸಲಿದೆ. ಇದಲ್ಲದೆ ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟು ಇನ್ನೂ 5 ಕೋರ್ಟ್ ಹಾಲ್ಗಳನ್ನು ನಿರ್ಮಿಸಲಾಗಿದೆ. ನೂತನ ಸಂಕೀರ್ಣದಲ್ಲಿ ಒಟ್ಟು 12 ಕೋರ್ಟ್ ಹಾಲ್ಗಳಿದ್ದು, ಹಳೆಯ ನ್ಯಾಯಾಲಯ ಕಟ್ಟಡವನ್ನು ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.


ಬೆಳ್ತಂಗಡಿ ಅಪೀಲ್ ಕೋರ್ಟ್ ಪುತ್ತೂರಿಗೆ
ಪ್ರಸ್ತುತ ಬೆಳ್ತಂಗಡಿ ನ್ಯಾಯಾಲಯದ ಪ್ರಕರಣಗಳ ಅಪೀಲ್ ಕೋರ್ಟ್ ಆಗಿ ಮಂಗಳೂರಿನ ಜಿಲ್ಲಾ ನ್ಯಾಯಾಲಯವನ್ನು ನಿಗದಿ ಮಾಡಲಾಗಿದೆ. ಇನ್ನು ಮುಂದೆ ಬೆಳ್ತಂಗಡಿ ಅಪೀಲ್ ನ್ಯಾಯಾಲಯವಾಗಿ ಪುತ್ತೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಮಾನ್ಯ ಮಾಡಬೇಕೆಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮನವಿ ಮಾಡಿದರು. ಪುತ್ತೂರು–ಉಪ್ಪಿನಂಗಡಿ ರಸ್ತೆಯ ಪಕ್ಕದಲ್ಲೇ ನೂತನ ನ್ಯಾಯಾಲಯ ಸಂಕೀರ್ಣ ಇರುವುದರಿಂದ ಬೆಳ್ತಂಗಡಿಯವರಿಗೆ ಇದು ಮಂಗಳೂರಿಗಿಂತ ಹೆಚ್ಚು ಸಮೀಪವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರಾದ ಸರಿತಾ ಡಿ., ಪ್ರಕೃತಿ ಕಲ್ಯಾಣಪುರ, ದೇವರಾಜ್, ಶಿವಣ್ಣ ಎಚ್.ಆರ್., ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ, ಕೋಶಾಧಿಕಾರಿ ಮಹೇಶ್ ಸವಣೂರು ಹಾಗೂ ಮಾಜಿ ಅಧ್ಯಕ್ಷ ಮಹೇಶ್ ಕಜೆ ಉಪಸ್ಥಿತರಿದ್ದರು.

