ಪಾಟ್ನಾ: ಬಿಹಾರದಲ್ಲಿ ನೂತನ ಎನ್ ಡಿಎ(ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಸರಕಾರ ರಚನೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್  ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. 10 ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಔಪಚಾರಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಬೆಳಗ್ಗೆ 11 ಗಂಟೆಗೆ ರಾಜ್ಯ ಕಚೇರಿಯಲ್ಲಿ ಸದಸ್ಯರು ಸಭೆ ಸೇರಿದ ನಂತರ ನಿತೀಶ್ ಕುಮಾರ್ ಅವರನ್ನು ಮೊದಲು ಜೆಡಿಯು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ಮಧ್ಯಾಹ್ನ 3:30 ಕ್ಕೆ, ಎನ್‌ಡಿಎ ಮೈತ್ರಿಕೂಟದ ಐದು ಪಾಲುದಾರ ಪಕ್ಷಗಳ ಶಾಸಕರು ಬಿಹಾರ ವಿಧಾನಸಭೆಯ ಸೆಂಟ್ರಲ್ ಹಾಲ್‌ನಲ್ಲಿ ಸಭೆ ಸೇರಿ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಬೆಂಬಲ ಪತ್ರಗಳನ್ನು ನೀಡಿ, ಹೊಸ ಸರಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ನಂತರ ನಿರ್ಗಮಿತ ವಿಧಾನಸಭೆಯನ್ನು ವಿಸರ್ಜಿಸಲಾಗುತ್ತದೆ.

ನಿತೀಶ್ ಕುಮಾರ್ ಗುರುವಾರ(ನ20) ಬೆಳಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

243 ಸದಸ್ಯ ಬಲದ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಎನ್‌ಡಿಎ ಅತ್ಯಮೋಘ ಜಯ ಸಾಧಿಸಿದೆ.

Leave a Reply

Your email address will not be published. Required fields are marked *