ಪುತ್ತೂರು:
ವಿದ್ಯಾರ್ಥಿಗಳ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತಿದಾಗ ಅದನ್ನು ದಣಿಗೂಡಿಸುವ ಬದಲು ಆಡಳಿತದ ಚೇಲಾಗಳಂತೆ ವರ್ತಿಸಿರುವ ಎನ್‌ಎಸ್‌ಯುಐ ನಾಯಕರ ಹೇಳಿಕೆ ಬಾಲಿಷವಾಗಿದ್ದು, ವಿದ್ಯಾರ್ಥಿ ಪ್ರತಿನಿಧಿಗಳೆನ್ನಲು ಅವರು ಅಯೋಗ್ಯರಾಗಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್, ಎನ್‌ಎಸ್‌ಯುಐ ನಾಯಕರ ಹೇಳಿಕೆ ಅವರ ಸ್ವಂತ ಆಲೋಚನೆಯಲ್ಲ; ಯಾರೋ ಬರೆದು ಕೊಟ್ಟ ಹೇಳಿಕೆಯಂತೆಯೇ ಕಾಣುತ್ತದೆ ಎಂದು ಟೀಕಿಸಿದ್ದಾರೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಅರಿಯದೇ, ಹೋರಾಟದ ಉದ್ದೇಶವನ್ನೇ ಮರೆತಿರುವ ಇಂತಹ ಪ್ರತಿಕ್ರಿಯೆ ದುರ್ಭಾಗ್ಯಕರವಾಗಿದೆ ಎಂದು ಹೇಳಿದ್ದಾರೆ.
ಇಂತಹ ಹೇಳಿಕೆಗಳಿಂದ ಆ ವಿದ್ಯಾರ್ಥಿ ನಾಯಕರು ಹಾಗೂ ಅವರ ಸಂಘಟನೆ ವಿದ್ಯಾರ್ಥಿಗಳಿಗಾಗಿ ಏನನ್ನೂ ಮಾಡುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೇವಲ ರಾಜಕೀಯ ನಾಯಕರ ಹಿಂಬಾಲಕರಾಗಿ ಕಾರ್ಯನಿರ್ವಹಿಸಿ, ವಿದ್ಯಾರ್ಥಿಗಳ ನಡುವೆ ರಾಜಕೀಯದ ವಿಷಬೀಜ ಬಿತ್ತುವುದೇ ಇವರ ಮುಖ್ಯ ಕಾರ್ಯವಾಗಿರುವುದು ವಿಷಾದಕರ ಸತ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಹಕ್ಕುಗಳು, ಸಮಸ್ಯೆಗಳು ಹಾಗೂ ಭವಿಷ್ಯದ ಕುರಿತು ನಿರಂತರವಾಗಿ ಹೋರಾಡುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಅಥವಾ ಸ್ವತಂತ್ರ ಚಿಂತನೆ ಇಲ್ಲದೆ ನಾಮ್‌ಕೆವಾಸ್ತೆ ಹೇಳಿಕೆಗಳನ್ನು ಮಾಡುವ ವಿದ್ಯಾರ್ಥಿ ಸಂಘಟನೆಗಳ ನಾಯಕರಿಗೆ ನೈತಿಕ ಹಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಡೆಗಣಿಸಿ ಆಡಳಿತದ ಪರವಾಗಿ ಮಾತನಾಡುವವರು ವಿದ್ಯಾರ್ಥಿ ಪ್ರತಿನಿಧಿಗಳೆನ್ನಲು ಯೋಗ್ಯರಲ್ಲ ಎಂದು ಮುಳಿಯ ಸಾತ್ವಿಕ್ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *