ರಾಜ್ಯದ ಕಾರಾಗೃಹಗಳು ಅಪರಾಧಿಗಳ ಸುಧಾರಣಾ ಕೇಂದ್ರಗಳಾಗಬೇಕಿದ್ದರೆ, ಇಂದು ಅವು ಉಗ್ರಗಾಮಿಗಳು ಮತ್ತು ಕುಖ್ಯಾತ ರೌಡಿಗಳ ಐಷಾರಾಮಿ ತಾಣಗಳಾಗಿ ಮಾರ್ಪಟ್ಟಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಸಕ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಗೃಹ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಬಹಿರಂಗಪಡಿಸಿದರು.




ಚರ್ಚೆಯ ವೇಳೆ ಮಾತನಾಡಿದ ಶಾಸಕರು, ಜೈಲಿನೊಳಗಿನ ಕುಖ್ಯಾತ ಉಗ್ರರು ಮತ್ತು ರೌಡಿಗಳು ರಾಜಾರೋಷವಾಗಿ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದು, ವಾಟ್ಸಾಪ್ ವಿಡಿಯೋ ಕಾಲ್ಗಳ ಮೂಲಕ ಹೊರಗಿನ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದರು. ಐಟಂ ಸಾಂಗ್ಗಳನ್ನು ವೀಕ್ಷಿಸುತ್ತಾ ಮೋಜು-ಮಸ್ತಿಯಲ್ಲಿ ತೊಡಗಿರುವ ಇವರಿಗೆ, ಸಾಮಾನ್ಯ ನಾಗರಿಕರಿಗೆ ಸಿಗದ ಸೌಲಭ್ಯಗಳು ಜೈಲಿನೊಳಗೆ ದೊರಕುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ಜೈಲಿನ ಗೋಡೆಗಳ ಮಧ್ಯೆಯೇ ಕುಳಿತು ಮತ್ತೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸುತ್ತಿರುವುದೂ ಗಂಭೀರ ವಿಚಾರ ಎಂದು ತಿಳಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಚಿವರು ಕೇವಲ ವರ್ಗಾವಣೆ ಮತ್ತು ಅಮಾನತುಗಳ ಮಾತಿಗೆ ಸೀಮಿತವಾಗಿದ್ದಾರೆ. ಆದರೆ ಸಮಸ್ಯೆಯ ಬೇರು ಇನ್ನೂ ಅಲುಗಿಲ್ಲ. ಗೃಹ ಸಚಿವರು ಮೃದು ಧೋರಣೆ ಬಿಟ್ಟು ಕಠಿಣವಾಗಿ ನಡೆದುಕೊಳ್ಳಬೇಕಿದೆ. ಅಧಿಕಾರಿಗಳ ಮೇಲೆ ಸರ್ಕಾರ ಹಿಡಿತ ಕಳೆದುಕೊಂಡಂತಾಗಿದೆ. ಸಚಿವರು ಜೋರಾಗಿ ನಿಂತರೆ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.


ಸರ್ಕಾರದ ಅಧಿಕೃತ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಕಿಶೋರ್ ಕುಮಾರ್ ಪುತ್ತೂರು, 2024ರಲ್ಲಿ ಜೈಲುಗಳಲ್ಲಿ ನಿಷೇಧಿತ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ 83 ಪ್ರಕರಣಗಳು ದಾಖಲಾಗಿದ್ದು, 2025ರ ಡಿಸೆಂಬರ್ 15ರವರೆಗೆ 70 ಹೊಸ ಎಫ್ಐಆರ್ಗಳು ದಾಖಲಾಗಿವೆ ಎಂದರು. ಬೆಂಗಳೂರು, ಶಿವಮೊಗ್ಗ ಮತ್ತು ಕಲಬುರಗಿ ಜೈಲುಗಳು ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ. ಜೈಲಿನೊಳಗೆ ಮದ್ಯ ತಯಾರಿಕೆ ನಡೆಯುತ್ತಿದೆ ಎಂಬ ಗಂಭೀರ ವರದಿಗಳಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಟೀಕಿಸಿದರು. ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಾಮರ್ಗಳು ಇದ್ದರೂ ಈ ಅಕ್ರಮಗಳು ನಡೆಯುತ್ತಿರುವುದು ಹೇಗೆ? ಭ್ರಷ್ಟ ಅಧಿಕಾರಿಗಳ ಸಹಕಾರವಿಲ್ಲದೆ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.
ಚರ್ಚೆ ಅಂತ್ಯಗೊಳಿಸಿದ ಅವರು, ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಜೈಲುಗಳು ಅಪರಾಧಗಳ ನಿಯಂತ್ರಣ ಕೊಠಡಿಗಳಾಗಿ ಮಾರ್ಪಡುವುದು ಖಚಿತ. ಜೈಲಿನೊಳಗೆ ರೂಪುಗೊಂಡಿರುವ ‘ಪ್ಯಾರಲ್ ಸರ್ಕಾರ’ಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


