ಕಡಬ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿಸಿಕೊಡುವ ಬದಲು ಲಂಚ, ದುರಾಡಳಿತ, ಸ್ವಜನಪಕ್ಷಪಾತ ಮತ್ತು ಸಾರ್ವಜನಿಕರನ್ನು ಅನವಶ್ಯಕವಾಗಿ ಸತಾಯಿಸುವುದು ಕೂಡಾ ಲೋಕಾಯುಕ್ತ ವ್ಯಾಪ್ತಿಯ ಅಪರಾಧವೇ ಎಂದು ಲೋಕಾಯುಕ್ತ ಡಿವೈಸ್ಪಿ ಸುರೇಶ್ ಕುಮಾರ್ ಪಿ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕಡಬ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳೂರು ಲೋಕಾಯುಕ್ತ ಅಧಿಕಾರಿಗಳ ವತಿಯಿಂದ ನಡೆದ ಸಾರ್ವಜನಿಕ ಜನಸಂಪರ್ಕ ಸಭೆಯಲ್ಲಿ ಅವರು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.
“ಗ್ರಾಮ ಮಟ್ಟದ ಕೆಲಸವನ್ನು ತಾಲೂಕು ಕಚೇರಿಗೆ ತಳ್ಳಬೇಡಿ”
ಪೋಡಿ, ಪಹಣಿ ತಿದ್ದುಪಡಿ, ಗ್ರಾಮ ಮಟ್ಟದ ಸಣ್ಣಪುಟ್ಟ ಕೆಲಸಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕರ ಮನವಿಗಳನ್ನು ಮನಸಾರೆ ಪರಿಶೀಲಿಸಿ, ಸಾಧ್ಯವಾದಲ್ಲಿ ಕಾನೂನುಬದ್ಧ ಪರಿಹಾರ ಒದಗಿಸಲು ಹಾಗೂ ಸಾಧ್ಯವಾಗದಿದ್ದರೆ ಸ್ಪಷ್ಟ ಕಾರಣದೊಂದಿಗೆ ಹಿಂಬರಹ ನೀಡಬೇಕೆಂದು ಹೇಳಿದರು.




ತಮ್ಮ ಜಾಗದಲ್ಲಿ ಅನಧಿಕೃತವಾಗಿ ಕಾಮಗಾರಿಗಳು ನಡೆಯುತ್ತಿರುವುದನ್ನು ಒಂದು ತಿಂಗಳಾದರೂ ಗಮನಿಸದ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅವರು ತೀವ್ರವಾಗಿ ಟೀಕಿಸಿದರು.
“ಸರಕಾರಿ ಹಣ ಅಂದರೆ ನಮ್ಮದೇ ಹಣ… ಕೆಲಸ ಪೂರ್ಣಗೊಂಡ ಬಳಿಕ ತೆರವು ಮಾಡಲು ಹೇಳಿದರೆ ಸರಕಾರಿ ನಿಧಿಯೇ ನಷ್ಟವಾಗುತ್ತದೆ ಎಂಬ ಅರಿವು ಇರಬೇಕು” ಎಂದು ಗರಂ ಆಗಿ ಹೇಳಿದರು.
ಕಂದಾಯ, ಸರ್ವೇ, ಮೆಸ್ಕಾಂ, ಅರಣ್ಯ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ಒಟ್ಟು 9 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2 ರನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಉಳಿದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಸ್ಪಿ ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಂಚಾಯಿತಿ ಸಿಇಒ ನವೀನ್‌ಕುಮಾರ್ ಭಂಡಾರಿ, ಶಿರಸ್ತೇದಾರ್ ಶಾಯದುಲ್ಲಾಖಾನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತು ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


ತಾಲೂಕು ಕಚೇರಿಯ ಅಸ್ವಚ್ಚತೆ ಬಗ್ಗೆ ಡಿವೈಸ್ಪಿಯ ಅಸಮಾಧಾನ
ಸಭೆಗೆ ಮುನ್ನ ತಾಲೂಕು ಆಡಳಿತ ಸೌಧ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್, ಶೌಚಾಲಯದ ನಳ್ಳಿಯಲ್ಲಿ ನೀರು ಸೋರಿಕೆಯಾಗಿರುವುದನ್ನು ಬಂದ್ ಮಾಡಲು ಯತ್ನಿಸಿದಾಗ ನಳ್ಳಿ ಮುರಿದು ನೀರು ಚಿಮ್ಮಿದ ಘಟನೆ ಅವರನ್ನು ಆಕ್ರೋಶಕ್ಕೀಡಾಗುವಂತೆ ಮಾಡಿತು.
ಶೌಚಾಲಯದಲ್ಲಿ ದುರ್ನಾತ ಹರಡಿದ್ದ ವಿಷಯವನ್ನು ಸಭೆಯಲ್ಲೇ ಪ್ರಸ್ತಾಪಿಸಿದ ಅವರು, “ಸುಸಜ್ಜಿತ ಕಟ್ಟಡ ಕಟ್ಟಿಕೊಟ್ಟರೂ ಅದರ ಸರಿಯಾದ ನಿರ್ವಹಣೆ ಇಲ್ಲದಿರುವುದು ಅಧಿಕಾರಿಗಳ ಬೇಜವಾಬ್ದಾರಿಯ ಉದಾಹರಣೆ” ಎಂದು ತಹಸೀಲ್ದಾರರಿಗೆ ಕಡ್ಡಾಯ ಸೂಚನೆ ನೀಡಿದರು.

