ನ್ಯಾಯಕ್ಕಾಗಿ ಕಳೆದ ಒಂಬತ್ತು ದಿನಗಳಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೃದ್ಧ ದಂಪತಿಗಳ ಹೋರಾಟಕ್ಕೆ ಕೊನೆಗೂ ಪರಿಹಾರ ದೊರೆತಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಧರಣಿ ಮುಕ್ತಾಯಗೊಂಡಿದ್ದು, ವೃದ್ಧ ದಂಪತಿಗಳಿಗೆ ಮನೆ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡಲು ಭರವಸೆ ನೀಡಲಾಗಿದೆ.

ತಮ್ಮ ಮನೆಯನ್ನು ತೆರವುಗೊಳಿಸಿದ ಕಡಬ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೃದ್ಧ ದಂಪತಿಗಳು ಕೊನೆಗೂ ಧರಣಿ ಕೈಬಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದ ರಾಧಮ್ಮ–ಮುತ್ತುಸ್ವಾಮಿ ದಂಪತಿಗಳ ಮನೆಯನ್ನು 13–11–2024ರಂದು ಅಕ್ರಮ ನಿರ್ಮಾಣ ಎಂಬ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು.
ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಡಿಸೆಂಬರ್ 29ರಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ಆರಂಭಿಸಿದ್ದರು. ಈ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನ್ಯಾಯ ಒದಗಿಸುವ ಭರವಸೆ ನೀಡಿದ್ದರು.
ಇಂದು ಸಹಾಯಕ ಆಯುಕ್ತರು ಹಾಗೂ ಕಡಬ ತಹಶೀಲ್ದಾರ್ ಅವರೊಂದಿಗೆ ಚರ್ಚೆ ನಡೆಸಿದ ಶಾಸಕರು, ವೃದ್ಧ ದಂಪತಿಗಳು ಇದ್ದ ಜಾಗದಲ್ಲೇ ಮನೆ ನಿರ್ಮಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದು, 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ.

ರಾಧಮ್ಮ–ಮುತ್ತುಸ್ವಾಮಿ ಅವರು ನಾಲ್ಕೈದು ವರ್ಷಗಳ ಹಿಂದೆಯೇ ಅಕ್ರಮ–ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ, ಅದನ್ನು ತಿರಸ್ಕರಿಸಲಾಗಿತ್ತು. ಇದೀಗ ಮರುಅರ್ಜಿಗೆ ಅವಕಾಶ ನೀಡಲಾಗಿದ್ದು, ಅದೇ ಜಾಗವನ್ನು ಮಂಜೂರು ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ವೃದ್ಧ ದಂಪತಿಗಳ ಮನೆ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯೂ ಕೆಲವೇ ದಿನಗಳಲ್ಲಿ ಹಿರಿಯ ಅಧಿಕಾರಿಗಳ ಕೈ ಸೇರುವ ಸಾಧ್ಯತೆ ಇದೆ.





ಕಳೆದ ಒಂದು ವರ್ಷದಿಂದ ನ್ಯಾಯಕ್ಕಾಗಿ ಬಡ ವೃದ್ಧ ದಂಪತಿಗಳು ಕಚೇರಿಯಿಂದ ಕಚೇರಿಗೆ ಅಲೆದರೂ ಸ್ಪಂದನೆ ದೊರಕಿರಲಿಲ್ಲ. ಅನಿವಾರ್ಯವಾಗಿ ಧರಣಿ ನಡೆಸಿದ ಪರಿಣಾಮ, ಇದೀಗ ಪುತ್ತೂರು ಶಾಸಕರ ಮುತುವರ್ಜಿಯಿಂದ ಪ್ರಕರಣಕ್ಕೆ ಪರಿಹಾರ ಸಿಕ್ಕಿದ್ದು, ಧರಣಿನಿರತರಲ್ಲಿ ಸಂತಸ ಮೂಡಿಸಿದೆ.


ಒಂದು ವರ್ಷದಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ವೃದ್ಧ ದಂಪತಿಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಮುಂದಿನ ಹದಿನೈದು ದಿನಗಳೊಳಗೆ ನೀಡಿದ ಭರವಸೆಗಳು ಈಡೇರುವ ವಿಶ್ವಾಸದಲ್ಲಿದ್ದಾರೆ ವೃದ್ಧ ದಂಪತಿಗಳು.


