ಉಪ್ಪಿನಂಗಡಿ:
ಕರಾಯ ಗ್ರಾಮದ ಕಲ್ಲೇರಿ ಸಮೀಪದಲ್ಲಿರುವ ಹೆಚ್.ಪಿ. ಕಂಪನಿಯ ಇಂದಿರಾ ಆಟೋ ಫ್ಯೂಯೆಲ್ಸ್ ಪೆಟ್ರೋಲ್ ಪಂಪ್ ಬಳಿ ಒಬ್ಬ ಅಪರಿಚಿತ ವ್ಯಕ್ತಿ ಕುಸಿದು ಮೃತಪಟ್ಟ ಘಟನೆ ಸಂಭವಿಸಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಯುಡಿಆರ್ ಸಂಖ್ಯೆ 59/2025, ಕಲಂ 194 ಬಂಸ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಪೆಟ್ರೋಲ್ ಪಂಪ್ ಸಿಬ್ಬಂದಿ ರಾಧಾಕೃಷ್ಣ ನಾಯಕ (33) ಅವರು ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 7, 2025ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ, ಕಚೇರಿಯ ಬಾಗಿಲು ತೆಗೆಯಲು ಬಂದಾಗ 60–65 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಪೆಟ್ರೋಲ್ ಪಂಪ್ ಮುಂಭಾಗ ನಿಂತುಕೊಂಡು ತೂರಾಡುತ್ತಿರುವುದು ಗಮನಕ್ಕೆ ಬಂದಿದೆ.


ವ್ಯಕ್ತಿಯ ಉಡುಪಿನ ವಿವರ:
ಅಂಗಿ ಇಲ್ಲ
ಕಪ್ಪು ಚಡ್ಡಿ
ಹೆಗಲಿನಲ್ಲಿ ಕೇಸರಿ ಶಾಲು
ಎಡ ಕೈಯ ರಟ್ಟೆ ಹಾಗೂ ಕೈಗಂಟಿನಲ್ಲಿ ಬಾವು


ವ್ಯಕ್ತಿ ಅಮಲು ಪದಾರ್ಥ ಸೇವಿಸಿದಂತೆ ವರ್ತಿಸುತ್ತಿದ್ದರೆಂದು ಸಿಬ್ಬಂದಿ ತಿಳಿಸಿದ್ದಾರೆ. ವಿಚಾರಿಸಿದಾಗ ಅವರು ತುಳು ಭಾಷೆಯಲ್ಲಿ “ಸ್ವಲ್ಪ ಹೊತ್ತಿನ ಬಳಿಕ ಹೋಗುತ್ತೇನೆ” ಎಂದು ನಿಧಾನವಾಗಿ ಪ್ರತಿಕ್ರಿಯಿಸಿದ್ದರಂತೆ.
ಆಮೇಲೆ ಕೆಲವೇ ಕ್ಷಣಗಳಲ್ಲಿ ಅವರು ಅಚಾನಕ್ ಕುಸಿದು ಬಿದ್ದರು. ಮತ್ತೊಮ್ಮೆ ವಿಚಾರಿಸಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ತಕ್ಷಣ 108 ಆಂಬುಲೆನ್ಸ್ಗೆ ಮಾಹಿತಿ ನೀಡಲಾಗಿದ್ದು, ಬೆಳಿಗ್ಗೆ 9:30ಕ್ಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ವೈದ್ಯರ ಪರೀಕ್ಷೆಯಲ್ಲಿ ಅವರು ಮೃತರಾಗಿರುವುದು ದೃಢಪಟ್ಟಿದೆ.
ಸ್ಥಳೀಯರು ಹಾಗೂ ಪೆಟ್ರೋಲ್ ಪಂಪ್ ಸಿಬ್ಬಂದಿಯಿಂದ ವಿಚಾರಣೆ ನಡೆಸಿದರೂ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅನಾರೋಗ್ಯ ಅಥವಾ ಅತಿಯಾದ ಮದ್ಯಪಾನದ ಪರಿಣಾಮವಾಗಿ ಮೃತಪಟ್ಟಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾರಿಸುದಾರರ ಪತ್ತೆ ಮತ್ತು ಕಾನೂನು ಕ್ರಮಗಳಿಗಾಗಿ ಮುಂದಿನ ತನಿಖೆ ಮುಂದುವರಿಯುತ್ತಿದೆ.



