ಪುತ್ತೂರು: ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾಗಮವಾದ ‘ಫಿಲೋ ಮಿಲನ – 2026’ ಕಾರ್ಯಕ್ರಮವು ಮಾರ್ಚ್ 14ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ರೈ ಜಿ ಮಾತನಾಡಿ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಮಾತ್ರ ನೀಡಿದ ಸಂಸ್ಥೆಯಲ್ಲ, ನನ್ನ ಜೀವನದ ಕನಸುಗಳಿಗೆ ರೂಪ ನೀಡಿದ ಸಂಸ್ಥೆಯಾಗಿದೆ. ಕಾಲೇಜು ಶಿಕ್ಷಣವು ಕೇವಲ ಪ್ರಮಾಣಪತ್ರ ನೀಡುವ ಸಂಸ್ಥೆಯಲ್ಲ, ವ್ಯಕ್ತಿತ್ವ ನಿರ್ಮಾಣದಲ್ಲೂ ಮಹತ್ತರ ಪಾತ್ರ ವಹಿಸುತ್ತದೆ. ಇಲ್ಲಿನ ಗುರುಗಳ ಸೇವಾಭಾವನೆ ಅನೇಕ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ದಿಕ್ಸೂಚಿಯಾಗಿದೆ ಎಂದು ಹೇಳಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರಿನ ಪ್ರಶಾಂತ್ ಎಂಟರ್ಪ್ರೈಸಸ್ ಪಡೀಲ್‌ನ ಪಾಲುದಾರರಾದ ಪ್ರಶಾಂತ್ ಶೆಣೈ ಮಾತನಾಡಿ, ನನ್ನ ಜೀವನ ಪಯಣ ಫಿಲೋಮಿನ ಶಿಕ್ಷಣ ಸಂಸ್ಥೆಯೊಂದಿಗೆ ಆರಂಭವಾಯಿತು. ನನ್ನ ಕ್ರೀಡಾ ಸಾಧನೆಗೆ ಈ ಸಂಸ್ಥೆ ಬೆನ್ನೆಲುಬಾಗಿ ನಿಂತಿತ್ತು. ಇದರ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಿತು ಎಂದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ‘ಫಿಲೋ ಮಿಲನ’ ಸಂತೋಷದ ಕ್ಷಣವಾಗಿದೆ. ಸಂತ ಫಿಲೋಮಿನಾ ಕಾಲೇಜು ಒಂದು ಧ್ಯೇಯವನ್ನು ಇಟ್ಟುಕೊಂಡು ಆರಂಭವಾದ ಸಂಸ್ಥೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸಿದ್ದು ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಶನ್ ಲಸ್ರಾದೋ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಶ್ರೀ ಪ್ರಕಾಶ್ ಬಿ ಸ್ವಾಗತಿಸಿದರು. ಕಾರ್ಯದರ್ಶಿ ಭರತ್ ಕುಮಾರ್ ವಂದಿಸಿದರು. ಹಿರಿಯ ವಿದ್ಯಾರ್ಥಿನಿ ಶ್ರೀದೇವಿ ಕೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *