ಉಪ್ಪಿನಂಗಡಿ: ನೇತ್ರಾವತಿ-ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಈ ಬಾರಿ ಡಿ.2ರಂದು ಸಂಜೆಯಿಂದ ಅಭಿಷೇಕ, ಶಿವಪೂಜೆ, ರುದ್ರಪಾರಾಯಣ, ಪಂಚಮೃತಾಭಿಷೇಕ, ಸೀಯಾಳಾಭಿಷೇಕ ಹಾಗೂ ಜಲಾಭಿಷೇಕ ನಡೆಯಲಿದೆ ಎಂದು ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2 ವರ್ಷಗಳಲ್ಲಿ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಯ ಅಣೆಕಟ್ಟೆಯ ಹಿನ್ನೀರು ಸಂಗ್ರಹಗೊಳ್ಳುತ್ತಿದ್ದರಿಂದ ಉದ್ಭವಲಿಂಗ ಜಲಾವೃತವಾಗುತ್ತಿತ್ತು. ಈ ಕಾರಣದಿಂದ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.

ಈ ಬಾರಿ ಮುಂದಿನ ಮಖೆ ಜಾತ್ರೆಯವರೆಗೆ 4 ಮೀಟರ್‌ ಎತ್ತರ ಇರುವ ಅಣೆಕಟ್ಟೆಯ ಗೇಟನ್ನು 2 ಮೀಟರ್‌ಗೆ ತಗ್ಗಿಸಿ ಜಾತ್ರೋತ್ಸವ ಮುಗಿದ ಬಳಿಕ ಗೇಟನ್ನು 4 ಮೀಟರ್‌ಗೆ ಏರಿಸುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದನೆ ದೊರೆತರೆ ಈ ಬಾರಿ ಹಿಂದಿನಂತೆ 3 ಮಖೆ ಜಾತ್ರೆಗೂ ಉದ್ಭವಲಿಂಗಕ್ಕೆ ಪೂಜೆ ನಡೆಸಬಹುದು ಎಂದರು.

ಈ ಮಧ್ಯೆ ಊರಿನ ಕೆಲವು ಭಕ್ತರು ಉದ್ಭವಲಿಂಗದ ಮರಳು ತೆಗೆದು ಉದ್ಭವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಉದ್ಭವಲಿಂಗಕ್ಕೆ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಸಲು ಸಂಕಲ್ಪಿಸಿ ಕ್ಷೇತ್ರದ ತಂತ್ರಿಗಳಿಂದ ಒಪ್ಪಿಗೆ ಪಡೆಯಲಾಗಿದೆ. ಅದರಂತೆ ಡಿ.2ರಂದು ಸಂಜೆ 6ರಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೇವಳದ ಪ್ರಧಾನ ಅರ್ಚಕರು, ಊರಿನ ಭಕ್ತರು ಸೇರಿ ಉದ್ಭವಲಿಂಗಕ್ಕೆ ವಿಶೇಷ ಪೂಜೆ ನಡೆಯಲಿದೆ ಎಂದರು.

ಇದೇ ವೇಳೆ ಭಕ್ತರಿಗೆ ಸ್ವಯಂ ಅಭಿಷೇಕದ ಅವಕಾಶವನ್ನೂ ಕಲ್ಪಿಸಲಾಗಿದೆ. ಬಳಿಕ ಪ್ರಸಾದ ವಿತರಿಸಲಾಗುವುದು ಎಂದು ಅವರು ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೋಮನಾಥ, ದೇವಿದಾಸ ರೈ, ವೆಂಕಪ್ಪ ಪೂಜಾರಿ, ಡಾ.ರಮ್ಯ ರಾಜಾರಾಮ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *