10 ಮಂದಿ ಸಾಧಕರಿಗೆ ಸಾಧನ ಪ್ರಶಸ್ತಿ ಪ್ರದಾನ
ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ, ಯುವ ಗೌಡ ಸಂಘ, ಗೌಡ ಮಹಿಳಾ ಸಂಘ ಹಾಗೂ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ಗಳ ಸಹಯೋಗದೊಂದಿಗೆ ಪ್ರತಿ ವರ್ಷ ನಡೆಯುವ ವಾರ್ಷಿಕ ಕಾರ್ಯಕ್ರಮವು ಈ ಬಾರಿ ಡಿಸೆಂಬರ್ 25ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಾಜದ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದಿಂದ ಗಣಪತಿ ಹವನ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ನಂತರ ತಾಲೂಕಿನ ಮಾತೃ ಸಂಘ, ಯುವ ಗೌಡ ಸೇವಾ ಸಂಘ, ಮಹಿಳಾ ಸಂಘ ಹಾಗೂ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಎಲ್., ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯಪ್ರವರ್ತಕ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಗೌಡ ಸಂಘಗಳ ಅಧ್ಯಕ್ಷರುಗಳು ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ.




ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಭೆಗೆ ಮೊದಲು ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಭಾ ಕಾರ್ಯಕ್ರಮದ ನಂತರವೂ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರಿಗೆ ‘ಸಾಧನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪಡೆಯುವವರು:
ಕೃಷಿ ಕ್ಷೇತ್ರ: ಕೆಮ್ಮಾರ ಗಂಗಾಧರ ಗೌಡ
ಸಹಕಾರ ಕ್ಷೇತ್ರ: ಶಿವರಾಮ ಗೌಡ ಇಡ್ಯಪೆ
ಸಾಮಾಜಿಕ ಕ್ಷೇತ್ರ: ರತ್ನಾವತಿ ಜಿ.ವಿ. ಗೌಡ, ಪ್ರಮೋದ್ ಕುಮಾರ್
ಶಿಕ್ಷಣ ಕ್ಷೇತ್ರ: ಎ.ವಿ. ನಾರಾಯಣ
ವೈದ್ಯಕೀಯ ಕ್ಷೇತ್ರ: ಕು. ಧನ್ಯ ಬೈಲಾಡಿ
ಉದ್ಯಮ ಕ್ಷೇತ್ರ: ಸುಂದರ ಗೌಡ ಉಪ್ಪಿನಂಗಡಿ
ಸರ್ಕಾರಿ ವೈದ್ಯಕೀಯ ಕ್ಷೇತ್ರ: ಡಾ. ಯದುರಾಜ್
ಪತ್ರಿಕೋದ್ಯಮ ಕ್ಷೇತ್ರ: ಸಿಂಚನ ಊರುಬೈಲು
ವಿಶೇಷ ಪ್ರತಿಭೆ: ಕು. ಶಮಿಕಾ ಹಿರೇಬಂಡಾಡಿ


ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು, ನಿಯೋಜಿತ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧರ್ ಪಾಣತ್ತಿಲ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಗೌಡ ಸೇವಾ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.


