ಪುತ್ತೂರು: ಪರಮವೀರ ಚಕ್ರ ಪ್ರಶಸ್ತಿ ಪಡೆದ ವೀರ ಯೋಧ, ಭಾರತಾಂಬೆಯ ಹೆಮ್ಮೆಯ ಸುಪುತ್ರ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರು ಡಿ.27 ರಂದು ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಬೃಹತ್ ಅಭಿನಂದನಾ ಸಮಾರಂಭ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ ಇಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಬಿ. ಮತ್ತು ಅಂಬಿಕಾ ವಿದ್ಯಾ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮ ಪುತ್ತೂರಿನ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಎಂದರು.

ಡಿ.27 ರಂದು ಬೆಳಗ್ಗೆ 9 ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಮೆರವಣಿಗೆಯು ಆರಂಭಗೊಂಡು ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಧರ ಭಟ್ ವಾಣಿಜ್ಯ ಸಂಕೀರ್ಣದ ಮುಂಭಾಗದ ಮೂಲಕ ಕಿಲ್ಲೆ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ತನಕ ಸಾಗಿಬರಲಿದೆ. ಈ ಮೆರವಣಿಗೆಯಲ್ಲಿ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ರಥದಲ್ಲಿ ಕುಳ್ಳಿರಿಸಿ ಕರೆತರಲಾಗುತ್ತದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಚೆಂಡೆ, ಗೊಂಬೆ, ಸ್ತಬದ್ಧ ಚಿತ್ರಗಳೂ ಜತೆ ಸೇರಲಿವೆ. ಅಂಬಿಕಾ ಸಂಸ್ಥೆಗಳ ಉದ್ಯೋಗಿಗಳು, ವಿವಿಧ ವಿದ್ಯಾಸಂಸ್ಥೆಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಾಜಿ ಸೈನಿಕರನ್ನೊಳಗೊಂಡಂತೆ ಸಮಾಜದ ಬೇರೆ ಬೇರೆ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನೂರಾರು ಆಟೋ ರಿಕ್ಷಾಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಮೆರವಣಿಗೆಯ ವೇಳೆ ವ್ಯಾಪಾರಸ್ಥರು, ಜನಸಾಮಾನ್ಯರಿಗೆ ಈ ವೀರಸಾಹಸಿಗೆ ಹಾರಾರ್ಪಣೆಯ ಮೂಲಕ ಗೌರವಿಸುವುದಕ್ಕೆ ಅವಕಾಶವಿರುತ್ತದೆ ಎಂದವರು ಹೇಳಿದರು.





ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಅಂಬಿಕಾ ಶಿಕ್ಷಣ ಸಂಸ್ಥೆಗಳು ದೇಶಪ್ರೇಮ, ಧರ್ಮಜಾಗೃತಿ, ಸಂಸ್ಕೃತಿ-ಸಂಸ್ಕಾರಗಳಿಗೆ ಹೆಸರಾಗಿವೆ. ಭಾರತೀಯ ಸೇನೆ, ಸೈನಿಕರ ಬಗ್ಗೆ ಅಪಾರ ಗೌರವ ಹೊಂದಿದೆ. ಅಂಬಿಕಾದಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಾರತೀಯಸೇನೆ ಹಾಗೂ ಸೈನಿಕರ ತ್ಯಾಗ, ಪರಿಶ್ರಮಗಳ ಬಗೆಗೆ ಅರಿವು ಮೂಡಿಸುವ ಕಾರ್ಯ ನಿರಂತರ ನಡೆಯುತ್ತಿವೆ. ಸೈನಿಕರ ಮಕ್ಕಳಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಶುಲ್ಕ ವಿನಾಯಿತಿಯನ್ನೂ ನೀಡಲಾಗುತ್ತಿದೆ. 2024ರಲ್ಲಿ ಕಾರ್ಗಿಲ್ ವಿಜಯೋತ್ಪದಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ್ದ ಕ್ಯಾ. ಯೋಗೇಂದ್ರ ಸಿಂಗ್ ಯಾದವ್ ಹಾಗೂ ಕ್ಯಾ. ನವೀನ್ ನಾಗಪ್ಪ ಅವರನ್ನು ಗೌರವಿಸಲಾಗಿತ್ತು. ಇದೀಗ ಪರಮವೀರ ಚಕ್ರ ಪ್ರಶಸ್ತಿ ಪಡೆದ ವೀರ ಯೋಧ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಗೌರವಿಸಲಾಗುವುದು. ಡಿ.27 ರಂದು ಪೂರ್ವಾಹ್ನ 11 ಗಂಟೆಗೆ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಸಂಜಯ್ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ, ಸಂಘ ಸಂಸ್ಥೆಯವರಿಗೆ ಹಾರಾರ್ಪಣೆಗೆ ಅವಕಾಶವಿದೆ. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಾಮಾಜಿಕ ಭಾಗವಹಿಸುವಿಕೆ
ಕಾರ್ಗಿಲ್ ಹೋರಾಟ ನಮ್ಮ ದೇಶದ ಮಾನಾಭಿಮಾನದ ಸಂಕೇತ. ಅಕಸ್ಮಾತ್ ಆ ಯುದ್ಧದಲ್ಲಿ ನಮ್ಮ ಸೈನಿಕರು ಕೈಚೆಲ್ಲಿ ಕುಳಿತಿದ್ದಿದ್ದರೆ ನಮ್ಮ ಇಂದಿನ ಪರಿಸ್ಥಿತಿಯನ್ನು ಊಹಿಸುವುದಕ್ಕೂ ಅಸಾಧ್ಯ. ನಮ್ಮ ರಕ್ಷಣೆಗಾಗಿ ಪ್ರಾಣಾರ್ಪಣೆಗೂ ಸಿದ್ದರಾಗಿ ಭಾರತಾಂಬೆಯ ಗೌರವವನ್ನು ನಮ್ಮ ಸೈನಿಕರು ಉಳಿಸಿ ಬೆಳೆಸಿಕೊಟ್ಟದ್ದನ್ನು ನಾವು ಸದಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲೇಬೇಕು. ಅಂತಹ ಯುದ್ಧದಲ್ಲಿ ಭಾಗಿಯಾಗಿ ತನ್ನ ದೇಹಕ್ಕೆ ವೈರಿ ಗುಂಡುಗಳು ಹೊಕ್ಕರೂ ಛಲಬಿಡದೆ ನೇರಾ ನೇರ ದೈಹಿಕ ಹೋರಾಟ ನಡೆಸಿ ವೈರಿಗಳನ್ನು ಯಮಪುರಿಗಟ್ಟಿದ್ದಲ್ಲದೆ ಅವರದೇ ಮೆಷಿನ್ ಗನ್ ಮೂಲಕ ಅವರನ್ನೇ ಸುಟ್ಟು ಹಾಕಿದ ವೀರ ಸೈನಿಕ ಲೆ. ಸಂಜಯ್ ಕುಮಾರ್ ಪುತ್ತೂರಿಗೆ ಆಗಮಿಸುತ್ತಿರುವುದು ರೋಮಾಂಚನಕಾರಿ ವಿಚಾರ. ವಿಶೇಷವಾಗಿ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟು ದೇಶ ರಕ್ಷಿಸಿದ ಕದನಕಲಿಯನ್ನು ಹತ್ತಿರದಿಂದ ಕಾಣುವುದಕ್ಕೆ ಅನುವು ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ನಟ್ಟೋಜ ಹೇಳಿದರು.


ರಜತ ಮಹೋತ್ಸವ
ಆದರ್ಶಗಳ ತಳಹದಿಯಲ್ಲಿ ಶಿಕ್ಷಣವನ್ನು ಸಾಕಾರಗೊಳಿಸಬೇಕೆಂಬ ಸ್ಪಷ್ಟ ಚಿಂತನೆಯಡಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮೂಲಕ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಲಾಯಿತು. 1999ರಲ್ಲಿ ಅಂಬಿಕಾ ವಿದ್ಯಾಲಯ ಎಂಬ ಹೆಸರಿನಡಿ ಆರಂಭಿಸಲಾದ ಶಿಕ್ಷಣ ವ್ಯವಸ್ಥೆಗೆ ಈಗ ಇಪ್ಪತ್ತೈದರ ಸಂಭ್ರಮ. ರಜತಮಹೋತ್ಸವದ ಸವಿನೆನಪಿಗಾಗಿ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇತ್ತೀಚೆಗಷ್ಟೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಕ್ಷಿಣ ಭಾರತದ ಪ್ರಸಿದ್ದ ಗಾಯಕರಾದ ಪದ್ಮಶ್ರೀ ಪಿ. ಉನ್ನಿಕೃಷ್ಣನ್, ಅವರ ಸುಪುತ್ರಿ ಉತ್ತರಾ ಉನ್ನಿಕೃಷ್ಣನ್ ಹಾಗೂ ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ಬಹುದೊಡ್ಡ ಕಾರ್ಯಕ್ರಮವಾಗಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಉಸ್ತುವಾರಿ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ಪ್ರಗತಿಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ., ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮಾಜೆ ಉಪಸ್ಥಿತರಿದ್ದರು.


