ಪುತ್ತೂರು: ಒಳಮೊಗ್ರು ಗ್ರಾಮದ ಹೃದಯಭಾಗದಲ್ಲಿರುವ ಕೈಕಾರ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಫೆಬ್ರವರಿ 14 ಮತ್ತು 15ರಂದು ವೈಭವದ ಶತಮಾನೋತ್ಸವ ಸಮಾರಂಭ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಈ ಸಂದರ್ಭದಲ್ಲಿ ನೂತನ ಸಾಂಸ್ಕೃತಿಕ ಸಭಾಭವನ, ವೇದಿಕೆ ಹಾಗೂ ರಂಗಮಂದಿರದ ಉದ್ಘಾಟನೆ, ಸಭಾ ಕಾರ್ಯಕ್ರಮ, ಶಾಲಾ ಮಕ್ಕಳ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.



ಫೆ.14ರಂದು ಬೆಳಿಗ್ಗೆ 10.30ಕ್ಕೆ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ವೆಂಕಪ್ಪ ಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಕೈಕಾರ ಅವರು ನೂತನ ಧ್ವಜಸ್ತಂಭವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಸಂಜೆ 5.30ಕ್ಕೆ ನಡೆಯುವ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ದೀಪಪ್ರಜ್ವಲನೆ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶತಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬ್ರಿಜೇಶ್ ಚೌಟ ಬಹುಮಾನ ವಿತರಿಸಲಿದ್ದಾರೆ.
ಮುಂಬೈ ಹೇರಂಬ ಇಂಡಸ್ಟ್ರೀಸ್‌ನ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಶಾಲೆಯ ಸಾಧಕರಲ್ಲಿ ನೂರು ಮಂದಿ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ಎಂಆರ್‌ಪಿಎಲ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಶತಮಾನೋತ್ಸವ ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಲಿದ್ದು, ವಿಜಯ ಮಂಜುನಾಥ ಶೆಟ್ಟಿ ಕೈಕಾರ ಅವರು ಪನಡ್ಕ ಮಂಜುನಾಥ ಶೆಟ್ಟಿ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಕೆ.ಕೆ.ಶೆಟ್ಟಿ ಅವರು ಕೈಕಾರ ಕುಸುಮ ಸುಬ್ಬಣ್ಣ ಶೆಟ್ಟಿ ರಂಗಮಂದಿರವನ್ನು ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 3ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ವಿಠಲ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಜರುಗಲಿದೆ. ರಾತ್ರಿ 8ಕ್ಕೆ ಶಾಲಾ ಮಕ್ಕಳ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಕಲಾ ಸೌರಭ, ಗೀತ್ ಮ್ಯೂಸಿಕಲ್ಸ್ ಮಂಗಳೂರು ಕರುಣಾಕರ್ ಅವರಿಂದ ದ್ವಿಕಂಠ ಸಿರಿ ಗಾಯನ ಹಾಗೂ ಅಶೋಕ್ ಪೊಳಲಿ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಫೆ.15ರಂದು ಮಧ್ಯಾಹ್ನ 12ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ಆದರ್ಶ ಆಸ್ಪತ್ರೆಯ ಡಾ. ಎಂ.ಕೆ. ಪ್ರಸಾದ್ ಬಹುಮಾನ ವಿತರಿಸಲಿದ್ದಾರೆ. ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನವೀನ್ ವೇಗಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ಶ್ರೀ ವಿಷ್ಣು ಕಲಾ ತಂಡ, ದೂಮಡ್ಕ ಇರ್ದೆ ಇವರಿಂದ ನೃತ್ಯ ವೈಭವ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಬಳಗದವರಿಂದ ‘ದಕ್ಷ ಯಜ್ಞ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ 8ಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ತುಳು ಹಾಸ್ಯಭರಿತ ನಾಟಕ ‘ಮರ್ಲ್ ಕಟ್ಟೋರ್ಚಿ’ ಪ್ರದರ್ಶನಗೊಳ್ಳಲಿದೆ. ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಭೋಜೇ ಗೌಡ, ಕಿಶೋರ್ ಕುಮಾರ್ ಪುತ್ತೂರು, ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
1983ರವರೆಗೆ 1ರಿಂದ 5ನೇ ತರಗತಿವರೆಗೆ ಕಾರ್ಯನಿರ್ವಹಿಸಿದ್ದ ಈ ಶಾಲೆ, 1983ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣಗೊಂಡು ಪ್ರಸ್ತುತ 7ನೇ ತರಗತಿವರೆಗೆ ಶಿಕ್ಷಣ ನೀಡುತ್ತಿದೆ. 2019ರಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿ ಸುಮಾರು 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶತಮಾನೋತ್ಸವದ ಸವಿ ನೆನಪಿಗಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಸರ್ಕಾರದ ಅನುಮೋದನೆಯೂ ದೊರೆತಿರುವುದು ಸಂತಸದ ವಿಷಯ ಎಂದು ಸೀತಾರಾಮ ರೈ ಚೆಲ್ಯಡ್ಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಶಿವಸದನ, ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಭಾರ ಮುಖ್ಯಗುರು ರಾಮಣ್ಣ ರೈ, ಎಲ್‌ಕೆಜಿ-ಯುಕೆಜಿ ಬೆಟರ್‌ಮೆಂಟ್ ಕಮಿಟಿ ಅಧ್ಯಕ್ಷ ಸಂಜಿತ್ ರೈ ತೊಟ್ಲ ಉಪಸ್ಥಿತರಿದ್ದರು.

