ಪುತ್ತೂರು: ಬೊಳುವಾರು ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಜನವರಿ 10ರಂದು ಬೊಳುವಾರಿನ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಸಹಪರಿವಾರ ಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.





ಕಾರ್ಯಕ್ರಮದ ಭಾಗವಾಗಿ ಸಂಜೆ 5.15ರಿಂದ ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳಿಂದ ಗಾನಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹಾಗೂ ಬೊಳುವಾರು ಶ್ರೀ ದುರ್ಗಾ ಉಳ್ಳಾಳ್ತಿ ಸಹಪರಿವಾರ ಕ್ಷೇತ್ರದ ಉಪಾಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಹಿರಿಯ ಅರ್ಥದಾರರು ಹಾಗೂ ಪ್ರತಿಷ್ಠಾನದ ಮಾರ್ಗದರ್ಶಕರಾದ ಗುಂಡ್ಯಡ್ಕ ಈಶ್ವರ ಭಟ್ ಅವರನ್ನು ಗೌರವಿಸಲಾಗುವುದು. ರಾತ್ರಿ 7.30ಕ್ಕೆ ಕ್ಷೇತ್ರದ ದೇವಿಗೆ ದುರ್ಗಾಪೂಜೆ ನಡೆಯಲಿದ್ದು, ರಾತ್ರಿ 8ಕ್ಕೆ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ “ನರಕಾಸುರ ಮೋಕ್ಷ ಹಾಗೂ ಶ್ರೀ ಕೃಷ್ಣ ಪಾರಿಜಾತ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರು, ಕಾರ್ಯದರ್ಶಿ ಶಂಕರ್ ಭಟ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್ ಹಾಗೂ ಪ್ರತಿಷ್ಠಾನದ ಸದಸ್ಯ ಅನಂತ ನಾರಾಯಣ ಉಪಸ್ಥಿತರಿದ್ದರು.


