ಪುತ್ತೂರು:
ಜಾತಿ–ಮತ ಬೇಧವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಹಾಗೂ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಭಕ್ತರು ಆಗಮಿಸುವ ಇತಿಹಾಸ ಪ್ರಸಿದ್ಧ ಈಶ್ವರಮಂಗಲ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಬಹುಃ ವಲಿಯುಲ್ಲಾಇ ಮದ್ದೂರ್ (ರ.ಅ) ಅವರ ಹೆಸರಿನಲ್ಲಿ ಆಚರಿಸಲಾಗುವ ಈಶ್ವರಮಂಗಲ ಮುಖಾಂ ಉರೂಸ್ ಹಾಗೂ 7 ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜ.15ರ ತನಕ ಈಶ್ವರಮಂಗಲ ಯಾಸೀನ್ ಮುತ್ತು ತಂಜಳ್ ನಗರದಲ್ಲಿ ನಡೆಯಲಿದೆ ಎಂದು ಉರೂಸ್ ಸಮಿತಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.





ಪ್ರತಿ ದಿನ ರಾತ್ರಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮಗಳು ನಡೆಯಲಿವೆ. ಜ.10ರಂದು ರಾತ್ರಿ ಅಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ (ಕಿಲ್ಲೂರು ತಂಜಳ್), ಜ.11ರಂದು ಹನೀಫ್ ನಿಝಾಮಿ ಮೊಗ್ರಾಲ್, ಜ.12ರಂದು ಮುಳ್ಳೂರ್‌ಕರ ಮುಹಮ್ಮದ್ ಅಲಿ ಸಖಾಫಿ ಅವರು ಮುಖ್ಯಪ್ರಭಾಷಣ ನೀಡಲಿದ್ದಾರೆ. ಜ.13ರಂದು ಸಯ್ಯಿದ್ ಮುಖಾರ್ ತಂಜಳ್ ಕುಂಬೋಳ್ ಅವರು ದುವಾ ಆಶೀರ್ವಚನ ನೀಡಲಿದ್ದು, ಬಳಿಕ ಹಾಫೀಝ್ ಮಾಹಿನ್ ಮನ್ನಾವಿ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜ.14ರಂದು ಡಾ. ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹಲ್ (ಮುತ್ತನ್ನೂರು ತಂಜಳ್) ಅವರು ಮುಖ್ಯಪ್ರಭಾಷಣ ನೀಡಲಿದ್ದಾರೆ.

ಜ.15ರಂದು ರಾತ್ರಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯಿದ್ ಎನ್‌ಪಿಎಂ ಮೈನುಲ್ ಅಬಿದೀನ್ ತಂಜಳ್ ಅಲ್ ಬುಖಾರಿ ಕುನ್ನುಂಗೈ ಹಾಗೂ ಅಸ್ಸಯ್ಯಿದ್ ಎನ್‌ಪಿಎಂ ಜಲಾಲುದ್ದೀನ್ ತಂಜಳ್ ಅಲ್ ಬುಖಾರಿ ಅವರು ದುವಾಶೀರ್ವಾಚನ ನೀಡಲಿದ್ದಾರೆ. ಎಂ.ಜೆ.ಎಂ. ಈಶ್ವರಮಂಗಲದ ಅಧ್ಯಕ್ಷ ಟಿ.ಎ. ಅಬ್ದುಲ್ ಖಾದರ್ ಅವರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾರೋಪ ದಿನ ಅನ್ನದಾನ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ತ್ವಾಹಾ ಪಿ.ಎಸ್., ಉಪಾಧ್ಯಕ್ಷ ಮುಸ್ತಾಫ ಮೇನಾಲ, ಕೋಶಾಧಿಕಾರಿ ಟಿ.ಎ. ಮಹಮ್ಮದ್, ಕಾರ್ಯದರ್ಶಿ ಅಬು ಎಚ್.ಎಚ್., ಜೊತೆ ಕಾರ್ಯದರ್ಶಿ ರಹಿಮಾನ್ ಉಪಸ್ಥಿತರಿದ್ದರು.


