ಪುತ್ತೂರು: ಚಿತ್ರದ ಸೆನ್ಸಾರ್ ಬೋರ್ಡ್‌ನಿಂದಲೂ ಪ್ರಶಂಸೆ ಪಡೆದಿರುವ ಕನ್ನಡ ಚಲನಚಿತ್ರ ‘ಮರಳಿ ಮನಸಾಗಿದೆ’ ಫೆಬ್ರವರಿ 12ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಇದರ ಮೊದಲ ಪೈಡ್ ಪ್ರೀಮಿಯರ್ ಶೋ ಜನವರಿ 24ರಂದು ಸಂಜೆ ಪುತ್ತೂರು ಜಿಎಲ್ ಒನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ಹಾಗೂ ಪುತ್ತೂರಿನವರೇ ಆದ ಅರ್ಜುನ್ ವೇದಾಂತ್, ಬೆನಕ ಟಾಕೀಸ್ ಪ್ರೋಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಮುದೇಗೌಡ್ರು ನವೀನ್ ಕುಮಾರ್ ಆರ್.ಒ., ತೆಲಿಗಿ ಮಲ್ಲಿಕಾರ್ಜುನಪ್ಪ, ಆಶಿತ್ ಸುಬ್ರಹ್ಮಣ್ಯ, ನಾಗರಾಜ್ ಶಂಕರ್ ಅವರು ನಿರ್ಮಿಸಿದ್ದು, ವಿಜಯ್ ಕುಮಾರ್ ಎಸ್., ಹರೀಶ್ ಎಸ್. ಸಹನಿರ್ಮಾಪಕರಾಗಿದ್ದಾರೆ ಎಂದರು.

ಚಿತ್ರದಲ್ಲಿ ಬಹುತೇಕ ಕರಾವಳಿ ಭಾಗದ ಕಲಾವಿದರು ಅಭಿನಯಿಸಿದ್ದು, ನಾಯಕ ನಟನಾಗಿ ಅರ್ಜುನ್ ವೇದಾಂತ್ ಅವರೊಂದಿಗೆ ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಭೋಜರಾಜ್ ವಾಮಂಜೂರು, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಹಿರಿಯ ನಟ ನಾಗಾಭರಣ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು ಕನ್ನಡದಲ್ಲಿ ಆರಂಭಗೊಂಡು ಮಂಗಳೂರು ಕನ್ನಡದ ಸೊಗಡಿನೊಂದಿಗೆ ಮೂಡಿಬಂದಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಪ್ರಶಂಸೆ ಲಭಿಸಿರುವುದು ವಿಶೇಷವಾಗಿದೆ ಎಂದರು.

ಜ.24ರಂದು ಸಂಜೆ 4 ಗಂಟೆಗೆ ನಡೆಯಲಿರುವ ಪ್ರೀಮಿಯರ್ ಶೋ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಾಸ್ಯ ನಟ ಭೋಜರಾಜ್ ವಾಮಂಜೂರು ಮಾತನಾಡಿ, ಚಿತ್ರದಲ್ಲಿ ತಮ್ಮ ಪಾತ್ರವಿದ್ದು, ಇದು ಮಕ್ಕಳೊಂದಿಗೆ ಕುಟುಂಬದವರು ಒಟ್ಟಾಗಿ ಕುಳಿತು ನೋಡಬಹುದಾದ ಮನೋರಂಜನೆಯ ಚಿತ್ರವಾಗಿದೆ ಎಂದು ಹೇಳಿದರು.
ಚಿತ್ರದ ಸಹನಿರ್ದೇಶಕ ಆಶಿತ್ ಸುಬ್ರಹ್ಮಣ್ಯ ಮಾತನಾಡಿ, ಸುಮಾರು ಎರಡೂವರೆ ಗಂಟೆಗಳ ಅವಧಿಯ ಈ ಚಿತ್ರವು ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ. ಪುತ್ತೂರಿನಲ್ಲಿ ಮೊದಲ ಪೈಡ್ ಪ್ರೀಮಿಯರ್ ಶೋ ಆರಂಭಗೊಂಡು ನಂತರ ಉಡುಪಿ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ಹಂಚಿಕೆದಾರರು ಬಾಲಕೃಷ್ಣ ರೈ ಕುಕ್ಕಾಡಿ, ನವೀನ್ ಕುಲಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *