ಕಡಬ: ತುಳುನಾಡಿನ ಪಾರಂಪರಿಕ ‘ಕೋಳಿ ಅಂಕ’ವನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕು; ತಪ್ಪಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಎಚ್ಚರಿಸಿದೆ. ಮಾ.1ನೇ ಭಾನುವಾರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನದಯಾಳು ರೈತ ಸಭಾಭವನದಲ್ಲಿ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾ ಪ್ರಮುಖ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ತಿಳಿಸಿದರು.




ಶುಕ್ರವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ–ಉಡುಪಿ ಭಾಗಗಳಲ್ಲಿ ದೈವಾರಾಧನೆ ಶ್ರೇಷ್ಠ ಸಂಪ್ರದಾಯವಾಗಿದ್ದು, ಕೆಲವೆಡೆ ನೇಮೋತ್ಸವದ ಮೊದಲು, ಇನ್ನೂ ಕೆಲವೆಡೆ ಬಳಿಕ ಕೋಳಿ ಅಂಕ ನಡೆಯುತ್ತದೆ. ಕರಾವಳಿಯಿಂದ ಘಟ್ಟದ ಅಂಚಿನವರೆಗೂ ವ್ಯಾಪಿಸಿರುವ ಈ ಗ್ರಾಮೀಣ ಕ್ರೀಡೆಗೆ ಸುಮಾರು 850 ವರ್ಷಗಳ ಇತಿಹಾಸವಿದೆ. “ಕಂಬಳದಷ್ಟೇ ಮುಂಚೂಣಿಯಲ್ಲಿರುವ ಈ ಕ್ರೀಡೆ ಯಾರಿಗೂ ತೊಂದರೆ ಉಂಟು ಮಾಡಿಲ್ಲ. ಜೂಜು ಮಸ್ತಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮೂಲಕ ಜನರ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ” ಎಂದು ಅವರು ಆರೋಪಿಸಿದರು. ಜೂಜುರಹಿತ ಕೋಳಿ ಅಂಕಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.


ಕಂಬಳ, ಕುದುರೆ ರೇಸ್, ಜಲ್ಲಿಕಟ್ಟು, ಹೋರಿ ಓಟ ಮುಂತಾದ ಕ್ರೀಡೆಗಳಿಗೆ ಅವಕಾಶ ನೀಡುತ್ತಿರುವಾಗ ರೈತಾಪಿ ವರ್ಗದವರ ಕ್ರೀಡೆಯಾದ ಕೋಳಿ ಅಂಕಕ್ಕೆ ಕಾನೂನು ಚೌಕಟ್ಟು ತರುವುದೇಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಈಗಾಗಲೇ ಪುತ್ತೂರು ಶಾಸಕ ಬೆಂಬಲ ಸೂಚಿಸಿದ್ದಾರೆ; ಕರಾವಳಿಯ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸಬೇಕು. ಮಾ.1ರ ಸಭೆಯಲ್ಲಿ ಸುಳ್ಯ ಶಾಸಕ ಸೇರಿದಂತೆ ದೈವಸ್ಥಾನ–ದೇವಸ್ಥಾನಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ವೇದಿಕೆಯ ಜಿಲ್ಲಾ ಸಂಚಾಲಕ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಮಾತನಾಡಿ, ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಂಘಟನೆ ರೂಪುಗೊಂಡಿದೆ. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಮಾರ್ಗದರ್ಶನದಲ್ಲಿ ದೈವಸ್ಥಾನ–ದೇವಸ್ಥಾನಗಳ ಪ್ರಮುಖರನ್ನು ಒಗ್ಗೂಡಿಸಿ ಕಾನೂನುಬದ್ದ ಹೋರಾಟ ರೂಪಿಸಲಾಗಿದೆ. ಕೋಳಿ ಅಂಕ ನಿಲ್ಲಿಸುವುದರಿಂದ ಸಾವಿರಾರು ಸಣ್ಣ ವ್ಯಾಪಾರಸ್ಥರ ಜೀವನೋಪಾಯದ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಗಿನ ಎಲ್ಲಾ ಶಾಸಕರಲ್ಲಿ ಮನವಿ ಮಾಡಿ, ವಿಧಾನಸೌಧದಲ್ಲಿ ಧ್ವನಿ ಎತ್ತುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಕಡಬ ತಾಲೂಕು ಪ್ರಮುಖರಾದ ಆನಂದ ಪೂಜಾರಿ (ಕಡಬ), ರಮೇಶ್ (ಆಲಂಕಾರು), ಹರೀಶ್ (ಕಲ್ಕಾಡಿ) ಹಾಗೂ ಗೋಪಿನಾಥ್ ಬಂಟ್ರ ಉಪಸ್ಥಿತರಿದ್ದರು.


