ಮೈಸೂರು: ಸಾಂಸ್ಕೃತಿಕ ನಗರಿ ಎಂದೆನಿಸಿಕೊಂಡಿರುವ ಮೈಸೂರನಲ್ಲಿ ಕಳೆದ ಇಪ್ಪತ್ತೊಂಭತ್ತು ವರ್ಷಗಳಿಂದ ಒಡಿಸ್ಸಿ ನೃತ್ಯ ಕಲೆಯನ್ನು ಪರಿಚಯಿಸುತ್ತಾ, ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ರುದ್ರ ನೃತ್ಯಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್‌ರವರು, ಈಗ ನಾಲ್ಕನೇ ಆವೃತ್ತಿಯ ಮೈಸೂರು ಒಡಿಸ್ಸಿ ಉತ್ಸವವನ್ನು ಸಂಘಟಿಸಿದ್ದಾರೆ ಎಂದು ಗುರು ಸಿಂಧು ಕಿರಣ್‌ರವರ ಶಿಷ್ಯೆ-ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನ.23, 2025 ರಂದು ಮೈಸೂರು ವಿಜಯ ನಗರದಲ್ಲಿನ ಪ್ರತಿಷ್ಟಿತ ಜಗನ್ನಾಥ್ ಸೆಂಟರ್ -ಫಾರ್ ಆರ್ಟ್ ಅಂಡ್ ಕಲ್ಚರ್ (ಜೆಸಿಎಸಿ), ವೇದಿಕೆಯಲ್ಲಿ ಸಂಜೆ 05.30ಕ್ಕೆ ಈ ಮೈಸೂರು ಒಡಿಸ್ಸಿ ಉತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವದಲ್ಲಿ ನಾಡಿನ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಮೈಸೂರಿನ ಶ್ರೀ ಕೃಷ್ಣ ಗಾನ ಸಭಾದ ಅಧ್ಯಕ್ಷರಾದ ಶ್ರೀಧರ ರಾಜ್ ಅರಸ್, ಮೈಸೂರಿನ ಪುರಿ ಜಗನ್ನಾಥ ಸಾಂಸ್ಕೃತಿಕ ಮತ್ತು ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಘನಶ್ಯಾಮ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಬಿ. ಪಿ. ಮೂರ್ತಿ, ಒಡಿಸ್ಸಿ ನೃತ್ಯ ಕಲಾವಿದರು ಹಾಗೂ ಆರಿಯಾಧನಾ -ಫೌಂಡೇಶ್‌ನ್‌ನ ನಿರ್ದೇಶಕರೂ ಆದ ಕೆ. ಜ್ಯೋತಿರ್ಮಯಿ ಪಟ್ನಾಯಕ್, ಮೈಸೂರಿನ ಪ್ರಸಿದ್ಧ ನೃತ್ಯ ಕಲಾವಿದರಾದ ಬದರಿ ದಿವ್ಯಭೂಷಣ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಮೈಸೂರು ಓಡಿಸ್ಸಿ ಉತ್ಸವ 2025 ಅನ್ನು ಪುರಿ ಜಗನ್ನಾಥ್ ಸಾಂಸ್ಕೃತಿಕ ಮತ್ತು ಕಲ್ಯಾಣ ಸಮಾಜದ ಅಧ್ಯಕ್ಷರಾದ ಘನಶ್ಯಾಮ ಪ್ರಧಾನ್, ಅಸ್ಸಾಂನ ಕಾಜಿರಂಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪ್ರಶಾಂತ ಕುಮಾರ ಮಿಶ್ರ, ಮೈಸೂರಿನ ಮನಸ್ಥಳ ಮೈಂಡ್ ಆರ್ಟ್ ಆಫ್ ಲಿವಿಂಗ್ ಹಾಗೂ ರುದ್ರ ನೃತ್ಯ ಯೋಗಶಾಲಾ ಪರಿವಾರ ಮತ್ತು ವಿದ್ಯಾರ್ಥಿಗಳೊಂದಿಗೆ ನೃತ್ಯ ಗುರು ಸಿಂಧು ಕಿರಣ್ ಆಯೋಜಿಸಿದ್ದಾರೆ ಎಂದರು.

ಗುರು ಸಿಂಧು ಕಿರಣ್‌ರವರು, ಮೈಸೂರಿನ ಗೋಕುಲಂನಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿದ್ದು, ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ನೃತ್ಯ ವಿದ್ಯಾರ್ಥಿಗಳಿಗೆ ಒಡಿಸ್ಸಿ ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ. ಇವರು ಪದ್ಮಭೂಷಣ ಗುರು ಕೇಳುಚರಣ್ ಮಹಾಪಾತ್ರ, ಪ್ರೋತಿಮಾ ಗೌರಿ ಬೆಡಿ ಮತ್ತು ಗುರು ರತಿಕಾಂತ್ ಮಹಾಪಾತ್ರ ಅವರ ಶಿಷ್ಯೆ. ಸಿಂಧು ಕಿರಣ್‌ರವರು, ನೃತ್ಯ ವಿನ್ಯಾಸಕಿಯಾಗಿ, ಕಲಾವಿದೆಯಾಗಿ, ನೃತ್ಯಗುರುವಾಗಿ, ಸಂಪನ್ಮೂಲ ವ್ಯಕ್ತಿಯಾಗಿ ದೇಶ ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ, ನೃತ್ಯೋತ್ಸವಗಳಲ್ಲಿ ಒಡಿಸ್ಸಿ ನೃತ್ಯ ಪ್ರದರ್ಶಿಸಿ, ಶ್ರೇಷ್ಟ ಪರಂಪರೆ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ ಎಂದು ಗುರುವಿನ ಪರಿಚಯ ಮಾಡಿಕೊಟ್ಟ ಅವರು, ಮೈಸೂರಿನಲ್ಲಿ ಒಡಿಸ್ಸಿಯನ್ನು ಪರಿಚಯಿಸುವ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುವ ದೃಷ್ಟಿಯಿಂದ ರುದ್ರ ನೃತ್ಯ ಯೋಗಶಾಲೆಯನ್ನು ಸ್ಥಾಪಿಸಿ, ಆ ಮೂಲಕ ಮುಂದಿನ ಪೀಳಿಗೆಗೆ ನೃತ್ಯ ಪರಂಪರೆಯನ್ನು ಧಾರೆ ಎರೆಯುತ್ತಿದ್ದಾರೆ. ಮೈಸೂರು ಒಡಿಸ್ಸಿ ಉತ್ಸವ ಮೂಲಕ ಅಪರೂಪದ ಈ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮನ್ನಣೆ ತರುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ಈ ಮೈಸೂರು ಉತ್ಸವದ ಮೂಲಕ ಜಗತ್ತಿನಾದ್ಯಾಂತ ಕಲಾವಿದರು ಮೈಸೂರಿಗೆ ಆಹ್ವಾನಿಸಿ ಅವರಿಂದ ನೃತ್ಯ ಪ್ರದರ್ಶನ ನೀಡಿ, ಆ ನೃತ್ಯ ಪರಂಪರೆಯ ಶ್ರೇಷ್ಟತೆಯನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಉಚಿತವಾಗಿ ನಡೆಯುವ ಈ ಮೈಸೂರು ಒಡಿಸ್ಸಿ ಉತ್ಸವದಲ್ಲಿ ನೃತ್ಯಾಸಕ್ತರು, ನೃತ್ಯ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ನೃತ್ಯಗುರು ಸಿಂಧು ಕಿರಣ್, ರುದ್ರನೃತ್ಯ ಯೋಗ ಶಾಲೆಯ ಹಿತೈಷಿ, ಪತ್ರಕರ್ತ ವೈದ್ಯನಾಥ್ ಹೆಚ್. ಯು, ಪ್ರ‍್ಸಾನ್ಸ್ ನೃತ್ಯ ಕಲಾವಿದೆ ಹಾಗೂ ಗುರು ಸಿಂಧು ಕಿರಣ್‌ರವರ ಶಿಷ್ಯೆ ಅವಿನಾ ಉಪಸ್ಥಿತರಿದ್ದರು.

ಮೈಸೂರಿನ ರುದ್ರ ನೃತ್ಯಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್‌ರವರ ವಿದ್ಯಾರ್ಥಿಗಳಿಂದ ಆರಂಭಗೊಳ್ಳುವ ಈ ನೃತ್ಯೋತ್ಸವದಲ್ಲಿ ನಾಡಿನ ಪ್ರಸಿದ್ಧ ನೃತ್ಯ ಕಲಾವಿದರಾದ ಪ್ರಸೂನ್ ಮಂಡಲ್, ಓಜಸ್ ಬಳ್ಳೂರು, ಅಮೃತಾ, ಅವಿಜಿತ್ ಕುಂದು, ಸಾನ್ವಿ, ಜೊತೆಗೆ ವಿಶೇಷವಾಗಿ ಈ ವರ್ಷದ ಅತಿಥಿ ಕಲಾವಿದರಾಗಿ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿರುವ ಭುವನೇಶ್ವರದ ರುದ್ರಾಕ್ಷ ಪೌಂಡೇಶನ್‌ನ ನೃತ್ಯಗುರು ಬಿಚಿತ್ರಾನಂದ ಸ್ವೈನ್ ರವರ ಶಿಷ್ಯರಾದ ಸಂತೋಷ್ ರಾಮ್ ಮತ್ತು ಸಮೀರ್ ಕುಮಾರ್ ಪಾಣಿಗ್ರಾಹಿ, ಬೆಂಗಳೂರಿನ ಆರಿಯಾಧನಾ ಪೌಂಡೇಶ್‌ನ ನಿರ್ದೇಶಕರು ಹಾಗೂ ನೃತ್ಯಗುರು ಜ್ಯೋತಿರ್ಮಯಿ ಪಟ್ನಾಯಕ್ ಅವರ ವಿದ್ಯಾರ್ಥಿಗಳು ಹಾಗೂ ಪ್ರತಿಷ್ಟಿತ ಉಸ್ತಾದ್ ಬಿಸ್ಮಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತರಾದ ಅಂತರಾಷ್ಟ್ರೀಯ ಖ್ಯಾತಿಯ ದೇವಶಿಷ್ ಪಟ್ನಾಯಕ್ ಹಾಗೂ ಅವರ ಬೆಂಗಳೂರಿನ ದೇವ ನೃತ್ಯಂ ಡ್ಯಾನ್ಸ್ ಸ್ಟುಡಿಯೋ ವಿದ್ಯಾರ್ಥಿಗಳು ಪಾಲ್ಗೊಂಡು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ನೃತ್ಯೋತ್ಸವದ ಮೂಲಕ ಒಡಿಸ್ಸಿ ನೃತ್ಯ ಪರಂಪರೆಯ ಪರಿಚಯ, ಲಾಲಿತ್ಯ ಹಾಗೂ ಅದರ ವೈಶಿಷ್ಟ್ಯಗಳನ್ನು ಮೈಸೂರಿನ ನೃತ್ಯಾಸಕ್ತರಿಗೆ ಪರಿಚಯಿಸಲಾಗುತ್ತಿದೆ ಎಂದು ಪೃಥೆ ಹವಾಲ್ದಾರ್ ಹೇಳಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಡಿಸ್ಸಿ ನೃತ್ಯ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದ್ದು, ನೃತ್ಯಾಸಕ್ತರಿಗೆ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ನೃತ್ಯ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದೇನೆ ಎಂದು ನೃತ್ಯ ಗುರು ಸಿಂಧು ಕಿರಣ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *