ಪುತ್ತೂರು: ಪ್ರಾಕೃತಿಕ ವಿಕೋಪಗಳು ಹಾಗೂ ವಿವಿಧ ರೋಗ ಬಾಧೆಗಳಿಂದ ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗಳು ಭಾರೀ ನಷ್ಟಕ್ಕೆ ಒಳಗಾಗಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ರೈತರು ಹವಾಮಾನ ಆಧಾರಿತ ಫಸಲು ಬೆಲೆ ವಿಮೆಯಿಂದ ಹೆಚ್ಚಿನ ಪರಿಹಾರ ನಿರೀಕ್ಷಿಸಿದ್ದರು. ಆದರೆ ಅತಿ ಕಡಿಮೆ ಪ್ರಮಾಣದ ವಿಮೆ ಮೊತ್ತ ಮಾತ್ರ ರೈತರ ಖಾತೆಗಳಿಗೆ ಜಮೆಯಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ತಿಳಿಸಿದ್ದಾರೆ.

ನಮ್ಮ ಸಂಘದ ವ್ಯಾಪ್ತಿಯ ಉರುವಾಳು ಗ್ರಾಮದ ಹಲವು ರೈತರ ಖಾತೆಗಳಿಗೆ ಇನ್ನೂ ವಿಮೆ ಮೊತ್ತ ಜಮೆಯಾಗಿಲ್ಲ. ಅಲ್ಲದೆ ಕರಾಯ ಮತ್ತು ತಣ್ಣೀರು ಪಂತ ಗ್ರಾಮಗಳ ರೈತರಿಗೆ ಕಳೆದ ವರ್ಷಗಳಿಗಿಂತ ಈ ವರ್ಷ ಬಹಳ ಕಡಿಮೆ ಮೊತ್ತದ ವಿಮೆ ಹಣ ಜಮೆಯಾಗಿದೆ. ಈ ತಾರತಮ್ಯ ನೀತಿಯ ವಿರುದ್ಧ ಡಿಸೆಂಬರ್ 12ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಎಲ್ಲಾ ಸಹಕಾರಿ ಸಂಘಗಳು ಸೇರಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಈ ರೀತಿಯ ತಾರತಮ್ಯ ಮುಂದುವರಿದರೆ ಬಯಲು ಸೀಮೆಯ ರೈತರಂತೆ ನಮ್ಮ ಜಿಲ್ಲೆಯ ರೈತರು ಕೂಡ ಶೋಚನೀಯ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದು ಜಯಾನಂದ ಕಲ್ಲಾಪು ಎಚ್ಚರಿಸಿದರು.

Leave a Reply

Your email address will not be published. Required fields are marked *