ಪುತ್ತೂರು: ಸುಮಾರು 38 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯಕ್ಕೆ ಕರ್ನಾಟಕದಲ್ಲಿ ಸಮರ್ಪಕ ರಾಜಕೀಯ ಪ್ರತಿನಿಧಿತ್ವ ಲಭಿಸುತ್ತಿಲ್ಲ. ವಿಶೇಷವಾಗಿ ಕರಾವಳಿ ಭಾಗದ ಕೊಂಕಣಿ ಭಾಷಿಗ ಮಂಗಳೂರು ಕ್ರೈಸ್ತರಿಗೆ ಕಳೆದ 31 ವರ್ಷಗಳಿಂದ ರಾಜ್ಯ ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಆತಂಕ ವ್ಯಕ್ತಪಡಿಸಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಮುಂದಿನ ಸಂಪುಟ ಪುನಾರಚಣೆ ಸಂದರ್ಭದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಧಾನಪರಿಷತ್‌ಗೆ ಇರುವ ಎರಡು ಸ್ಥಾನಗಳಲ್ಲಿ ಕನಿಷ್ಠ ಒಂದು ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಇತಿಹಾಸದಲ್ಲಿ ಅವಕಾಶಗಳ ಉಲ್ಲೇಖ 1979ರಲ್ಲಿ ಮಂಗಳೂರಿನ ಕೊಂಕಣಿ ಕ್ರೈಸ್ತ ಸಮುದಾಯದ ಪಿ.ಎಫ್. ರೊಡ್ರಿಗಸ್ ಮೀನುಗಾರಿಕಾ ಸಚಿವರಾಗಿದ್ದರು. 1989-94ರ ಅವಧಿಯಲ್ಲಿ ಬ್ರೇಸಿಯಸ್ ಡಿ’ಸೋಜ ಅವರು ಕಾನೂನು ಹಾಗೂ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದು, 25 ಸಾವಿರಕ್ಕೂ ಹೆಚ್ಚು ಬಾಕಿ ಕಡತಗಳನ್ನು ವಿಲೇವಾರಿ ಮಾಡಿ ದಾಖಲೆ ನಿರ್ಮಿಸಿದ್ದರು. ಆಸ್ಕರ್ ಫೆರ್ನಾಂಡೀಸ್ ಮತ್ತು ಮಾರ್ಗರೇಟ್ ಆಳ್ವ ಅವರು ಸಂಸತ್ ಸದಸ್ಯರಾಗಿ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಆದರೆ ಆ ನಂತರ ರಾಜ್ಯ ಮಟ್ಟದಲ್ಲಿ ಕ್ರೈಸ್ತ ಸಮುದಾಯಕ್ಕೆ ಮಂತ್ರಿಮಂಡಲದಲ್ಲಿ ಸಮರ್ಪಕ ಅವಕಾಶ ಸಿಕ್ಕಿಲ್ಲ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *