ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಯುದ್ಧ ಪರಿಸ್ಥಿತಿಯಿಂದ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. Israel ನಡೆಸಿದ ದಾಳಿಗೆ ಪ್ರತಿಯಾಗಿ ಲೇಬನೋನ್ ರಾಜಧಾನಿ ಬೆರೂಟ್ ಮೇಲೂ ಭಾರೀ ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿದೆ. ಹಲವರ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.




ಹಾವೇರಿ ಜಿಲ್ಲೆಯ ರಾಘವೇಂದ್ರ ಕುದುರಿ ಅವರು ಕುಟುಂಬದೊಂದಿಗೆ ಅಬು ಧಬಿ ನಲ್ಲಿ ನೆಲೆಸಿದ್ದು, ಕ್ಷಿಪಣಿ ದಾಳಿಯ ಭೀತಿಯ ನಡುವೆಯೇ ಸುರಕ್ಷಿತ ಸ್ಥಳಕ್ಕೆ ಸರಿಯಲಾಗಿದೆ ಎಂದು ತಿಳಿದುಬಂದಿದೆ. “ಮನೆಗಳ ಮೇಲೆಯೇ ಕ್ಷಿಪಣಿ ದಾಳಿ ನಡೆಯುತ್ತಿದ್ದು, ಸ್ನಾನಗೃಹದ ಮೇಲ್ಚಾವಣಿ ಕುಸಿದು ಬಿದ್ದಿದೆ” ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ.


ಇನ್ನೊಂದೆಡೆ, ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಇಂಜಿನಿಯರ್ ಗಿರೀಶ್ ಅವರು ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದ ವೇಳೆ ದುಬೈ ನಲ್ಲಿ ಸಿಲುಕಿದ್ದರು. ಬೆಂಗಳೂರು ಮುಖಾಂತರ Parisಗೆ ತೆರಳುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗಿರೀಶ್ ಸಂಪರ್ಕಕ್ಕೆ ಬಂದು “ನನಗೆ ಯಾವುದೇ ತೊಂದರೆ ಇಲ್ಲ, ನಾನು ಸುರಕ್ಷಿತವಾಗಿದ್ದೇನೆ” ಎಂದು ವಿಡಿಯೋ ಸಂದೇಶದ ಮೂಲಕ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಯುದ್ಧ ಪರಿಸ್ಥಿತಿಯಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕನ್ನಡಿಗರ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.


