ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲ್ಲೂಕಿನ ವತಿಯಿಂದ ಸ್ವ-ಉದ್ಯೋಗ ನಡೆಸುತ್ತಿರುವ ಹಾಗೂ ಆರಂಭಿಸಲು ಉತ್ಸುಕರಾದ ಪಾಲುದಾರ ಬಂಧುಗಳಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಮ ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ವ್ಯಕ್ತಿಯ ಸ್ವಾವಲಂಬಿ ಬದುಕಿಗೆ ಪೂರಕವಾಗಿ ವಿವಿಧ ತರಬೇತಿಗಳನ್ನು ನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಕರುಣಾಕರ ಜೈನ್ ಅವರು ತರಬೇತಿಯನ್ನು ನೀಡುತ್ತಾ, ಸ್ವಂತ ಉದ್ಯೋಗವನ್ನು ಯಶಸ್ವಿಯಾಗಿ ಮುಂದುವರೆಸುವ ಕುರಿತು ಹಾಗೂ ಈಗಾಗಲೇ ಸ್ವ-ಉದ್ಯೋಗದಲ್ಲಿ ತೊಡಗಿರುವ ಸದಸ್ಯರೊಂದಿಗೆ ವಿಚಾರ ವಿನಿಮಯ ನಡೆಸಿದರು. ಸ್ವ-ಉದ್ಯೋಗ ಎಂದರೆ ಕೇವಲ ವ್ಯಾಪಾರ ಮಾಡುವುದಲ್ಲ, ಪ್ರತಿದಿನ ಲಾಭ-ನಷ್ಟದ ಲೆಕ್ಕಾಚಾರವನ್ನು ಸರಿಯಾಗಿ ನಿರ್ವಹಿಸುವವನೇ ನಿಜವಾದ ಲಾಭ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.
ಕೇಂದ್ರ ಕಚೇರಿಯ ಸಿಡ್ಬಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಅನುಷಾ ರೈ ಅವರು ಸಿಡ್ಬಿ ಪ್ರಯಾಸ್ ಯೋಜನೆಯ ಕುರಿತು ಮಾಹಿತಿ ನೀಡಿ, ಯೋಜನೆ ಪಡೆಯಲು ಅಗತ್ಯವಿರುವ ದಾಖಲಾತಿಗಳ ಬಗ್ಗೆ ವಿವರವಾಗಿ ತಿಳಿಸಿದರು.
ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿ ಉದ್ಯಮಿಯಾಗಿರುವ ಸ್ಥಳೀಯರಾದ ನಾಗರಾಜ್ ಅವರು ತಮ್ಮ ಅನುಭವವನ್ನು ಹಂಚಿಕೊಂಡು ಭಾಗವಹಿಸಿದ ಸದಸ್ಯರಿಗೆ ಪ್ರೇರಣೆಯ ಮಾತುಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕರು, ಹಣಕಾಸು ಪ್ರಬಂಧಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಒಟ್ಟು 50 ಮಂದಿ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *