ಬಂಟ್ವಾಳ : ಬಂಟ್ವಾಳ ತಾಲೂಕಿನ ಕರೋಪಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ (ಮಾ.30) ರಿಂದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಅದ್ಧೂರಿಯಾಗಿ ನಡೆಯಲಿದೆ. ಉಪ್ಪಿನಂಗಡಿ ಮಹಾಕಾಳಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹಸಿರು ಹೊರಕಾಣಿಕೆ ಹಾಗೂ ನೇಪಾಳದ ಗಂಡಕಿ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿ ಅಖಂಡ ಭಾರತದ “ಏಕಾದಶ ಪುಣ್ಯ ನದಿಗಳ ತೀರ್ಥ “ಏಕಾದಶ ಕಲಶ” ಮೆರವಣಿಗೆ ಹೊರಟು, ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಮಠಂತಬೆಟ್ಟು, ಕೆಮ್ಮಾಯಿ, ಮಾರ್ಗವಾಗಿ ಆದರ್ಶ ಆಸ್ಪತ್ರೆ ಮುಂಭಾಗದಿಂದ ಮಧ್ಯಾಹ್ನದ ವೇಳೆಗೆ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಥ ಬೀದಿಗೆ ಪ್ರವೇಶಿಸಲಿದ್ದು, ಬಳಿಕ ಭವ್ಯ ಮೆರವಣಿಗೆ ಮೂಲಕ ಸಾಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೂಲಕ ಮಿತ್ತನಡ್ಕಕ್ಕೆ ತಲುಪಿ, ಗ್ರಾಮದ ದೈವಸ್ಥಾನ ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಸನ್ನಿದಿಯಿಂದ ವಿವಿಧ ಭಜನಾ ತಂಡಗಳು, ಚೆಂಡೆ – ಆಕರ್ಷಕ ಕವಾಯತ್ತುಗಳೊಂದಿಗೆ ನಾಡಿನ ವಿವಿಧ ಮಠಾಧೀಶರು, ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಶೋಭಾಯಾತ್ರೆ ಮೆರವಣಿಗೆಯು ಶ್ರೀ ಕ್ಷೇತ್ರ ಪದ್ಯಾಣಕ್ಕೆ ಬರಲಿದೆ.
ಶ್ರೀ ಕ್ಷೇತ್ರ ಪದ್ಯಾಣದಲ್ಲಿ ಬೆಳಗ್ಗೆ 08.30ರಿಂದ 10.30ರವರೆಗೆ ವಿವಿಧ ಭಜನಾ ಮಂಡಳಿಗಳಿಂದ “ಭಜನೆ” ನಡೆಯಲಿದ್ದು, ಜೊತೆಗೆ ಶ್ರೀಮತಿ ಪಾರ್ವತಿ ಪದ್ಯಾಣ ಬಳಗದವರಿಂದ ಭಕ್ತಿ ಸಂಗೀತ ನಡೆಯಲಿದೆ.




ಸಂಜೆ ಪೂರ್ಣಕುಂಭ ಸ್ವಾಗತದ ಮೂಲಕ ಕ್ಷೇತ್ರಕ್ಕೆ ತಂತ್ರಿಗಳ ಆಗಮನವಾಗಲಿದೆ. ಬಳಿಕ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಇದರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉಗ್ರಾಣ ಉದ್ಘಾಟಿಸಲಿದ್ದು, ಶ್ರೀಧಾಮ ಮಾಣಿಲದ ಪರಮಪೂಜ್ಯ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಕಣಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿರಲಿದ್ದಾರೆ.
ಸಂಜೆ “ಬಿಲ್ವಮಂಟಪ” ಸಭಾಂಗಣ “ಶಿವಾನುಗ್ರಹ” ವೇದಿಕೆಯಲ್ಲಿ ಬಳಿಕ ಕರೋಪಾಡಿ ಶ್ರೀ ಸುಬ್ರಾಯ ದೇವಸ್ಥಾನ ಮತ್ತು ಶ್ರೀ ಮಲರಾಯ ದೈವಸ್ಥಾನ ಇದರ ಆಡಳಿತ ಮೊಕ್ತೇಸರರಾದ ಶ್ರೀ ಮುಗುಳಿ ತಿರುಮಲೇಶ್ವರ ಭಟ್ಟ ಅವರ ಅಧ್ಯಕ್ಷತೆಯಲ್ಲಿ “ಸುಧರ್ಮ ಸಭೆ” ನಡೆಯಲಿದ್ದು, ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ, ಶ್ರೀಮದ್ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಸಲಿದ್ದಾರೆ. ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಪರಮಪೂಜ್ಯ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ, ಚಾಮುಂಡೇಶ್ವರೀ ಕ್ಷೇತ್ರ, ಕಣಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.





