ಮಂಗಳೂರು: ಮಂಗಳೂರು–ಬೆಂಗಳೂರು ಹಾಗೂ ಬೆಂಗಳೂರು–ಮಂಗಳೂರು ನಡುವಿನ ರೈಲುಗಳ ಸಂಚಾರದಲ್ಲಿ ನಿರಂತರ ವಿಳಂಬ ಉಂಟಾಗುತ್ತಿರುವುದರಿಂದ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕ್ರಾಸಿಂಗ್ ಸಮಸ್ಯೆ, ತಾಂತ್ರಿಕ ದೋಷಗಳು ಹಾಗೂ ಕಾರ್ಯಾಚರಣಾ ಕಾರಣಗಳಿಂದಾಗಿ ರೈಲುಗಳು ನಿಗದಿತ ಸಮಯಕ್ಕೆ ಸಂಚರಿಸದೆ ವಿಳಂಬವಾಗುತ್ತಿವೆ ಎಂದು ತಿಳಿದುಬಂದಿದೆ.





ಮಂಗಳೂರು–ಬೆಂಗಳೂರು ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು–ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳು ವಾರದಲ್ಲಿ ಸರಾಸರಿ ಅರ್ಧಗಂಟೆಗೂ ಅಧಿಕವಾಗಿ ತಡವಾಗುತ್ತಿವೆ. ಕೆಲವೊಮ್ಮೆ ಒಂದು ತಾಸುಕ್ಕೂ ಹೆಚ್ಚು ವಿಳಂಬವಾಗುತ್ತಿರುವುದು ಪ್ರಯಾಣಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಉದ್ಯೋಗ, ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಅಗತ್ಯಗಳಿಗೆ ಸಂಚರಿಸುವವರು ಈ ಸಮಸ್ಯೆಯಿಂದ ಹೆಚ್ಚು ಬಾಧೆ ಅನುಭವಿಸುತ್ತಿದ್ದಾರೆ.
ಕ್ರಾಸಿಂಗ್ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗದಿರುವುದು ಮತ್ತು ಮಾರ್ಗದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳು ರೈಲು ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ. ಇದರಿಂದ ದೀರ್ಘದೂರ ಪ್ರಯಾಣಿಕರಷ್ಟೇ ಅಲ್ಲದೆ, ಮಧ್ಯಂತರ ನಿಲ್ದಾಣಗಳಲ್ಲಿ ಏರುವ ಪ್ರಯಾಣಿಕರಿಗೂ ತೊಂದರೆ ಎದುರಾಗಿದೆ.


ಪ್ರಯಾಣಿಕರು ರೈಲ್ವೆ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕ್ರಾಸಿಂಗ್ ಹಾಗೂ ಕಾರ್ಯಾಚರಣಾ ವ್ಯವಸ್ಥೆಯನ್ನು ಸುಧಾರಿಸಿ, ರೈಲುಗಳನ್ನು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಳಂಬ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಕೆಲ ಪ್ರಯಾಣಿಕರು ನೀಡಿದ್ದಾರೆ.


