ಉಪ್ಪಿನಂಗಡಿ ಸಮೀಪ ಚಾಲನೆ ನಿರತ ಕೆಎಸ್ಆರ್‌ಟಿಸಿ ಬಸ್ ಚಾಲಕನಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಅಪಾಯಕರ ಸ್ಥಿತಿ ನಿರ್ಮಾಣವಾದರೂ, ಪ್ರಯಾಣಿಕನ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದ ಘಟನೆ ಗುರುವಾರ ನಡೆದಿದೆ.





ಗುರುವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸನ್ನು ಗೋವಿಂದ ನಾಯ್ಕ ಎಂಬವರು ಚಾಲನೆ ಮಾಡುತ್ತಿದ್ದರು. ಪೆರ್ನೇ ಗ್ರಾಮದ ಕರವೇಲು ಎಂಬಲಿ ಸಮೀಪಿಸುತ್ತಿದ್ದಾಗ ಚಾಲಕನಿಗೆ ಅಚಾನಕ್ ಎದೆನೋವು ಕಾಣಿಸಿಕೊಂಡು ಬಸ್ ಚಾಲನೆಯಲ್ಲಿ ವ್ಯತ್ಯಾಸ ಉಂಟಾಯಿತು. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದ ನ್ಯಾಯವಾದಿ ನೆಲ್ಯಾಡಿಯ ಇಸ್ಮಯಿಲ್ ಅವರ ಪುತ್ರ ತಕ್ಷಣವೇ ಮುಂದಕ್ಕೆ ಧಾವಿಸಿ ಚಲಿಸುತ್ತಿದ್ದ ಬಸ್ಸನ್ನು ನಿಧಾನವಾಗಿ ಹತೋಟಿಗೆ ತೆಗೆದುಕೊಂಡು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದರು.


ತಕ್ಷಣ ಚಾಲಕನನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಯಾಣಿಕನ ಸಮಯಪ್ರಜ್ಞೆಯಿಂದ ಸಂಭವನೀಯ ಭಾರೀ ಅಪಾಯ ತಪ್ಪಿದಂತಾಗಿದೆ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಘಟನೆಯ ನಂತರ ಸಾರಿಗೆ ನಿಯಂತ್ರಕರ ಸಹಕಾರದಿಂದ ಬಸ್ಸನ್ನು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸುರಕ್ಷಿತವಾಗಿ ತರಲಾಗಿದ್ದು, ಪ್ರಯಾಣಿಕರನ್ನು ಬೇರೊಂದು ವ್ಯವಸ್ಥೆಯ ಮೂಲಕ ಮುಂದಿನ ಪ್ರಯಾಣಕ್ಕೆ ಕಳುಹಿಸಲಾಯಿತು.


