ಪುತ್ತೂರು:
ಕೊಡಗು ಹಾಗೂ ಚಿಕ್ಕಮಗಳೂರಿನಂತಹ ತಂಪಾದ ಹವಾಮಾನ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ‘ಸಿಲ್ವರ್ ವುಡ್’ ಮರಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬೆಳೆಸುವ ಹೊಸ ಪ್ರಯೋಗಕ್ಕೆ ಪುತ್ತೂರಿನಲ್ಲಿ ಯಶಸ್ಸು ದೊರೆತಿದೆ. ಫ್ಲೈವುಡ್ ಹಾಗೂ ಪೀಠೋಪಕರಣಗಳ ತಯಾರಿಕೆಗೆ ಹೆಚ್ಚಿನ ಬೇಡಿಕೆ ಇರುವ ಈ ಮರವನ್ನು ಪರ್ಯಾಯ ಕೃಷಿ ಬೆಳೆಯಾಗಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ದಾರಂದಕುಕ್ಕ ಕಾಯರ್ತಡಿ ನಿವಾಸಿ ಕೃಷಿಕ ಅಜಿತಪ್ರಸಾದ್ ರೈ ಅವರು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಸಿಲ್ವರ್ ವುಡ್ ಮರಗಳು ದಕ್ಷಿಣ ಕನ್ನಡದ ಉಷ್ಣ ಹವಾಮಾನಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಇದ್ದರೂ, ಅದನ್ನು ಸವಾಲಾಗಿ ಸ್ವೀಕರಿಸಿದ ಅಜಿತಪ್ರಸಾದ್ ರೈ ಅವರು ತಮ್ಮ ಸುಮಾರು 20 ಎಕರೆ ಕೃಷಿಭೂಮಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಲ್ವರ್ ವುಡ್ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳಿಗೆ ಸಮರ್ಪಕ ನೀರಾವರಿ ಹಾಗೂ ಪೋಷಕಾಂಶಗಳನ್ನು ಒದಗಿಸುವ ಮೂಲಕ ಮರಗಳ ಬೆಳವಣಿಗೆಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲಾಗಿದೆ.



ಸಸಿಗಳನ್ನು ನೆಟ್ಟು ಎರಡು ವರ್ಷ ಕಳೆದಿದ್ದು, ಈಗ ಅವು ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ. ಇದರಿಂದ ದಕ್ಷಿಣ ಕನ್ನಡದ ಹವಾಗುಣದಲ್ಲೂ ಸಿಲ್ವರ್ ವುಡ್ ಮರಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂಬುದನ್ನು ಈ ಪ್ರಯೋಗ ಸಾಬೀತುಪಡಿಸಿದೆ.
ಸಿಲ್ವರ್ ವುಡ್ ಬೆಳೆಯಿಂದ ಕೃಷಿಕರಿಗೆ ದ್ವಿತೀಯ ಆದಾಯವೂ ಲಭ್ಯವಾಗುತ್ತಿದೆ. ಈ ಮರಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನು ಬಿಡಲಾಗಿದ್ದು, ಮರಗಳು ಉತ್ತಮ ಆಸರೆಯಾಗಿರುವುದರಿಂದ ಮೆಣಸಿನ ಬೆಳೆಯಲ್ಲೂ ಉತ್ತಮ ಉತ್ಪಾದನೆ ದೊರೆಯುತ್ತಿದೆ. ನೇರವಾಗಿ ಹಾಗೂ ಎತ್ತರವಾಗಿ ಬೆಳೆಯುವ ಈ ಮರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಫ್ಲೈವುಡ್, ಪೀಠೋಪಕರಣಗಳ ತಯಾರಿಕೆ ಜೊತೆಗೆ ಕಟ್ಟಡ ಕಾಮಗಾರಿಯಲ್ಲಿ ಕಂಬಗಳ ರೂಪದಲ್ಲೂ ಬಳಕೆ ಮಾಡಲಾಗುತ್ತದೆ.




ಎಲ್ಲಾ ಸಿಲ್ವರ್ ವುಡ್ ಮರಗಳು ಹುಲುಸಾಗಿ ಬೆಳೆಯುತ್ತಿದ್ದು, ಮುಂದಿನ ಎರಡು–ಮೂರು ವರ್ಷಗಳೊಳಗೆ ಕಟಾವು ಮಾಡಿದಲ್ಲಿ ಉತ್ತಮ ಆದಾಯ ಲಭಿಸುವ ನಿರೀಕ್ಷೆ ಇದೆ. ಈ ಪ್ರಯೋಗ ಕರಾವಳಿ ಭಾಗದ ಕೃಷಿಕರಿಗೆ ಹೊಸ ದಾರಿಯನ್ನು ತೆರೆದಿದ್ದು, ಪರ್ಯಾಯ ಕೃಷಿ ಬೆಳೆಗೆ ಸಿಲ್ವರ್ ವುಡ್ ಉತ್ತಮ ಆಯ್ಕೆಯಾಗಬಹುದು ಎಂಬ ಆಶಾಭಾವ ಮೂಡಿಸಿದೆ.

