ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಎಗರಿಸಿದ ಇಬ್ಬರು ಕಳ್ಳಿಯರನ್ನು ಧರ್ಮಸ್ಥಳ ಪೊಲೀಸರು ಹುಡುಕಿ ತಂದು ಲಾಕಪ್‌ಗೆ ತಳ್ಳಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲ್ಮೆಂಟ್ 2 ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ.ಜಾನ್(59) ಮತ್ತು ಮಗಳು ಮಸಾಭಿ @ ಆರತಿ (34) ಬಂಧಿತ ಆರೋಪಿಗಳಾಗಿದ್ದಾರೆ. ದೇವಳದ ಒಳಗೆ ಆಂಧ್ರ ಪ್ರದೇಶದಿಂದ ಬಂದಿದ್ದ ಭಕ್ತಾದಿಗಳ ಬ್ಯಾಗ್ ನಿಂದ ಚಿನ್ನಾಭರಣ ಕಳ್ಳತನ ಮಾಡಿ ಬಳಿಕ ಪರಾರಿಯಾಗಿದ್ದರು. ಈ ಖತಾರ್ನಾಕ್ ತಾಯಿ-ಮಗಳನ್ನು ಐದು ತಿಂಗಳ ಬಳಿಕ ಯಶಸ್ವಿ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಗಾಣಿಗೇರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶ ರಾಜ್ಯದ ನೆಲ್ಲೂರು ನಿವಾಸಿ ಜೆ.ಲತಾ ಮತ್ತು ಕುಟುಂಬ ಸಮೇತ ಮೇ.2 ರಂದು ಮನೆಯಿಂದ ಹೊರಟು ಮೇ.3 ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ದರ್ಶನಕ್ಕೆ 5:15 ರಿಂದ 6 ಗಂಟೆ ಸಮಯಕ್ಕೆ ಬ್ಯಾಗ್ ನಲ್ಲಿ 6,79,000 ರೂಪಾಯಿ ಮೌಲ್ಯದ 97 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಂಡು ಹೋಗಿದ್ದರು. ಬಳಿಕ ಉಡುಪಿ ಕಡೆ ಕೆಲಸದ ವಿಚಾರವಾಗಿ ಹೋಗುವಾಗ ಬ್ಯಾಗ್ ಒಳಗಡೆ ಇಟ್ಟಿದ ಚಿನ್ನಾಭರಣ ನೋಡಿದಾಗ ಯಾರೋ ಕಳ್ಳರು ಚಿನ್ನಾಭರಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿಯಿಂದ ವಾಪಸ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ಮೇ.4 ರಂದು ಜೆ.ಲತಾ ಪ್ರಕರಣ ದಾಖಲಿಸಿದ್ದರು.

ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ಕಳೆದ ಐದು ತಿಂಗಳಿನಿಂದ ವಿವಿಧ ಅಯಾಮಗಳಲ್ಲಿ ತನಿಖೆ ಮಾಡುತ್ತಿರುವಾಗ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳಿಬ್ಬರು ವಿವಿಧ ಕಡೆ ಪ್ರಯಾಣ ಮಾಡಿಕೊಂಡು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು‌. ಕೊನೆಗೂ ಆರೋಪಿಗಳು ನ.23 ರಂದು ಧರ್ಮಸ್ಥಳದ ದ್ವಾರಕ ಬಳಿ ಮತ್ತೆ ಕಳ್ಳತನ ಮಾಡಲು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ನ.23 ರಂದು ಭಾನುವಾರ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ.24 ರಂದು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣ ಆರೋಪಿಗಳ ಹುಬ್ಬಳಿ ಮನೆಯಿಂದ ನ.25 ರಂದು ಮಂಗಳವಾರ ಧರ್ಮಸ್ಥಳ ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *