ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆಗೆ ಸಂಬಂಧಿಸಿದಂತೆ ಗಂಭೀರ ಅಕ್ರಮ ಬೆಳಕಿಗೆ ಬಂದಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರು ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಕ್ತಿ ದಾಸ್ ಎಂಬ ವ್ಯಕ್ತಿ 2025ರ ಫೆಬ್ರವರಿ ತಿಂಗಳಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಆದರೆ ಪೊಲೀಸ್ ಪರಿಶೀಲನೆ ವೇಳೆ ಅರ್ಜಿದಾರ ನೀಡಿದ ವಿಳಾಸ ದಾಖಲೆಗಳಿಗೆ ತಾಳೆಯಾಗದ ಕಾರಣ ಆ ಅರ್ಜಿಯನ್ನು ನಾ-ಶಿಫಾರಸು ಮಾಡಲಾಗಿತ್ತು. ಬಳಿಕ 2025ರ ಜೂನ್ ತಿಂಗಳಲ್ಲಿ ಶಕ್ತಿ ದಾಸ್ ಮರು ಅರ್ಜಿಯನ್ನು ಸಲ್ಲಿಸಿದ್ದಾನೆ.




ಈ ಮರು ಅರ್ಜಿಯ ಸಂಬಂಧ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಅವರು, ತಮ್ಮ ಸಹೋದ್ಯೋಗಿ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಲ್ಲದೆ ಅವರ ಹೆಸರಿನಲ್ಲಿ ಸುಳ್ಳು ಪರಿಶೀಲನಾ ವರದಿ ತಯಾರಿಸಿ ಸಹಿಯನ್ನು ನಕಲಿ (ಫೋರ್ಜರಿ) ಮಾಡಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಪಡೆದು ಕಳುಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಈ ಅಕ್ರಮ ಬಹಿರಂಗವಾಗದಂತೆ ಪೊಲೀಸ್ ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿರುವುದೂ ತನಿಖೆಯಿಂದ ತಿಳಿದುಬಂದಿದೆ.
ದಿನಾಂಕ 19.12.2025ರಂದು ದಾಖಲೆಗಳ ಪರಿಶೀಲನೆಯ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿ ಆಗಿರುವ ಪಾಸ್‌ಪೋರ್ಟ್ ಅನ್ನು ಅಪರಾಧಿಕ ನಂಬಿಕೆ ದ್ರೋಹದ ಮೂಲಕ ಪಡೆದುಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 193/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)–2023ರ ಕಲಂ 336, 337, 316(5) ಹಾಗೂ 238ರಡಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಮತ್ತು ಸುಳ್ಳು ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಶಕ್ತಿ ದಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದ ಸಂಬಂಧ ಪೊಲೀಸ್ ಸಿಬ್ಬಂದಿ ಪ್ರದೀಪ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.




