ಕಡಬ: ಪುತ್ತೂರಿನ ಐತಿಹಾಸಿಕ ಹಾಗೂ ಭಕ್ತರ ಭಾವನೆಗಳಿಗೆ ಅತ್ಯಂತ ಪವಿತ್ರವಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ಟೆಂಪಲ್ ಸಭಾಭವನದಲ್ಲಿ ರಾಜಕೀಯ ಪ್ರೇರಿತ ಕಾರ್ಯಕ್ರಮ ನಡೆದಿರುವುದನ್ನು ವಿಶ್ವ ಹಿಂದೂ ಪರಿಷದ್ (ವಿ.ಹಿಂ.ಪ) ಮಾತೃಶಕ್ತಿ ಪ್ರಮುಖ್ ಪ್ರೇಮಲತಾ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇವಸ್ಥಾನಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರುವ ಪವಿತ್ರ ಸ್ಥಳಗಳಾಗಿವೆ. ಇಂತಹ ಪವಿತ್ರ ವೇದಿಕೆಗಳನ್ನು ರಾಜಕೀಯ ವೇದಿಕೆಯಾಗಿ ಬಳಸುವುದು ದೇವಾಲಯದ ಪರಂಪರೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಶತಮಾನಗಳ ಇತಿಹಾಸ ಹೊಂದಿರುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು ಸಾವಿರಾರು ಭಕ್ತರ ಭಕ್ತಿಗೆ ಪಾತ್ರವಾಗಿದೆ. ಇಂತಹ ದೇವಸ್ಥಾನದ ಆವರಣದಲ್ಲಿ ರಾಜಕೀಯ ಪ್ರೇರಿತ ಕಾರ್ಯಕ್ರಮಗಳನ್ನು ನಡೆಸುವುದು ದೇವಾಲಯದ ಪವಿತ್ರತೆಯನ್ನೇ ಪ್ರಶ್ನಾರ್ಥಕವಾಗಿಸುತ್ತದೆ ಎಂದು ಅವರು ಹೇಳಿದರು.
ದೇವಾಲಯಗಳ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜೋಪಯೋಗಿ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು. ರಾಜಕೀಯ ಕಾರ್ಯಕ್ರಮಗಳನ್ನು ದೇವಸ್ಥಾನದ ವೇದಿಕೆಯಲ್ಲಿ ನಡೆಸುವುದನ್ನು ಮುಂದಿನ ದಿನಗಳಲ್ಲಿ ತಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಮೇಲಿರುವುದರಿಂದ, ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರೇಮಲತಾ ತಿಳಿಸಿದ್ದಾರೆ.









