ಪುತ್ತೂರು: ದೀಪೋತ್ಸವ ಕಾರ್ಯಕ್ರಮದ ವೇಳೆ ದ್ವೇಷಪೂರಿತ ಭಾಷಣ ಮಾಡಿದರು ಎಂಬ ಆರೋಪದ ಮೇರೆಗೆ ದಾಖಲಾಗಿದ್ದ ಪ್ರಕರಣದಲ್ಲಿ ಡಾ. ಪ್ರಭಾಕರ ಭಟ್ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಭಾಕರ ಭಟ್ ಪರವಾಗಿ ವಾದ ಮಂಡಿಸಿರುವ ಖ್ಯಾತ ವಕೀಲ ಮಹೇಶ್ ಕಜೆ ಅವರು ಜಾಮೀನು ಪ್ರಕ್ರಿಯೆ ಕುರಿತ ಮಾಹಿತಿ ಹಂಚಿಕೊಂಡರು. ದೂರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕ್ರೈಂ ಸಂಖ್ಯೆ 118/2025 ರಂತೆ ಪ್ರಕರಣ ನೊಂದಾಯಿಸಲಾಗಿತ್ತು.
ವಕೀಲ ಮಹೇಶ್ ಕಜೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ, ಪ್ರಭಾಕರ ಭಟ್ ಹಲವು ಸಾಮಾಜಿಕ ಮತ್ತು ವಿದ್ಯಾಸಂಸ್ಥೆಗಳ ಸೇವೆಯಲ್ಲಿ ತೊಡಗಿರುವುದು, ಜೊತೆಗೆ ಹಿರಿಯ ನಾಗರಿಕರಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ವಿನಂತಿಸಲಾಗಿತ್ತು. ಆರಂಭಿಕ ಹಂತದಲ್ಲೇ ನ್ಯಾಯಾಲಯ ಮಧ್ಯಂತರ ರಿಲೀಫ್ ಒದಗಿಸಿತ್ತು.





ದೂರುದಾರರ ಪರವಾಗಿ ವಕೀಲರನ್ನು ನೇಮಿಸಲು ಅವಕಾಶ ನೀಡಲಾಗಿದ್ದು, ಅವರು ಮತ್ತು ಪ್ರೋಸಿಕ್ಯೂಷನ್ ಜಾಮೀನು ನೀಡಬಾರದೆಂದು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಕೀಲ ಮಹೇಶ್ ಕಜೆ ಅವರು, “ಪ್ರಭಾಕರ ಭಟ್ ನ್ಯಾಯಕ್ಕಾಗಿ ಹೋರಾಡುವ, ಕಾನೂನಿಗೆ ಗೌರವ ಕೊಡುವ ವ್ಯಕ್ತಿ. ಅವರ ವಿರುದ್ಧ ಹಲವು ದೂರುಗಳಿವೆ ಎಂಬ ಪ್ರೋಸಿಕ್ಯೂಷನ್ ವಾದಕ್ಕೂ, ಆ ಎಲ್ಲ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯದಿಂದಲೇ ರಕ್ಷಣೆ ದೊರೆತಿರುವುದು ಸತ್ಯ” ಎಂದು ಹೇಳಿದ್ದಾರೆ.
ಅವರು ಇನ್ನೂ ಹೇಳಿದರು, “ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆರಂಭದಲ್ಲೇ ಆದೇಶವಿತ್ತು. ಅವರು ತನಿಖೆಗೆ ಸಹಕರಿಸಿದ್ದಾರೆ. ಅವರ ಬಗ್ಗೆ ಹೊರಗೆ ಹರಿದಾಡಿದ್ದ ‘ಪರದಾಡುವ ಸ್ಥಿತಿ’ ಎಂಬ ಮಾತುಗಳಿಗೆ ಯಾವುದೇ ನೆಲೆ ಇಲ್ಲ. ನಾವು ಸಂವಿಧಾನಾತ್ಮಕ ಹೋರಾಟವನ್ನು ಮಾಡಿದ್ದೇವೆ, ಮೀಡಿಯಾ ಟ್ರಯಲ್ ಗೆ ಹೋಗಿಲ್ಲ.”
ನ್ಯಾಯಾಲಯ ಸಾಮಾನ್ಯವಾಗಿ ವಿಧಿಸುವ ಷರತ್ತುಗಳನ್ನು ನೀಡಿ ಪ್ರಭಾಕರ ಭಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಪ್ರಕರಣದಲ್ಲಿ ಮುಂದಿನ ಕ್ರಮ ಕಾನೂನಿನ ಚೌಕಟ್ಟಿನಂತೆ ಸಾಗಲಿದೆ ಎಂದು ಕಜೆ ಮಾಹಿತಿ ನೀಡಿದರು.



