ಕಡಬ: ವೃತ್ತಿಪರತೆ ಮತ್ತು ಸಂಘಟನಾ ಶಕ್ತಿಯನ್ನು ಬಲಪಡಿಸುವ ಉದ್ದೇಶದೊಂದಿಗೆ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ (KUWJ ಘಟಕ) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶುಕ್ರವಾರ ಕಡಬದ ಪ್ರೆಸ್ ಕ್ಲಬ್‌ನಲ್ಲಿ  ನೆರವೇರಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ  ಶ್ರೀನಿವಾಸ ನಾಯಕ್ ಇಂದಾಜೆ ಅವರು ಮಾತನಾಡಿ, “ತಾಲ್ಲೂಕು ಮಟ್ಟದ ಪತ್ರಕರ್ತರು ಸಮಾಜದ ಕಟ್ಟಕಡೆಯ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಂಘಟನೆಯ ಮೂಲಕ ಪತ್ರಕರ್ತರ ಹಿತರಕ್ಷಣೆ ಮತ್ತು ವೃತ್ತಿಪರ ಗೌರವವನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ,” ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ. ಎನ್. ಅವರು ಮಾತನಾಡಿ, ಜಿಲ್ಲಾ ಸಂಘವು ತಾಲ್ಲೂಕು ಘಟಕಗಳಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲಲಿದೆ. ಪತ್ರಕರ್ತರು ಒಗ್ಗಟ್ಟಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಂಘದ ಕಾರ್ಯದರ್ಶಿ ಸಿದ್ಧಿಕ್ ನೀರಾಜೆ ಅವರು ಸಂಘದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್. ಬಾಲಕೃಷ್ಣ ಕೊಯಿಲ ಅವರು ಅಧಿಕಾರ ಸ್ವೀಕರಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಚೆನ್ನಾವರ, ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ ಕಣಿಯೂರು ಮತ್ತು ಕೋಶಾಧಿಕಾರಿಯಾಗಿ ಪ್ರವೀಣ್ ರಾಜ್ ಕೆ.ಎಸ್. ಪದಗ್ರಹಣ ಮಾಡಿದರು.

ಸಂಘದ ಬಲವರ್ಧನೆಗಾಗಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗರಾಜ್ ಎನ್.ಕೆ., ವಿಜಯ್ ಕುಮಾರ್ ಕಡಬ, ರತ್ನಾಕರ ಸುಬ್ರಹ್ಮಣ್ಯ, ಹರೀಶ್ ಬಾರಿಂಜ ಮತ್ತು ಸ್ವಾತಿ ಬಾಳ್ತಿಲಾಯ ಕೆ.ವಿ. ಅವರು ನೇಮಕಗೊಂಡರು.ಪತ್ರಕರ್ತರ ಸಂಘದ ಸದಸ್ಯರಾದ ದಿವಾಕರ ಮುಂಡಾಲ, ವಿಶ್ವನಾಥ ನಡುತೋಟ, ಪ್ರಶಾಂತ್ ನೆಲ್ಯಾಡಿ, ತಸ್ಲೀಂ ಮರ್ದಾಳ ಸೇರಿದಂತೆ   ಕಡಬ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು,ಪತ್ರಿಕಾ ಏಜೆಂಟರು ಸೇರಿದಂತೆ ಹಲವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *