ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಸಿ. ಶೇ. ಕಜೆಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಪುತ್ತೂರು ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಚುನಾವಣೆ ನಡೆಸಲಾಗಿದ್ದು, ಜಿಲ್ಲಾ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.





ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ಹಿಂದೆಗೆತ ಪ್ರಕ್ರಿಯೆಗಳ ಬಳಿಕ ಡಿ.24ರಂದು ಅಂತಿಮ ಅಭ್ಯರ್ಥಿಗಳ ಘೋಷಣೆ ನಡೆಯಿತು. ಎಲ್ಲ ಹುದ್ದೆಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ, ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ಘೋಷಿಸಿ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಪದಾಧಿಕಾರಿಗಳ ವಿವರ: ಉಪಾಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಕರುಣಾಕರ ರೈ ಸಿ.ಎಚ್. ಹಾಗೂ ಉದಯವಾಣಿ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಎಂ.ಎಸ್. ಭಟ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ನ್ಯೂಸ್ 18 ವರದಿಗಾರ ಅಜಿತ್ ಕುಮಾರ್ ಮತ್ತು ಜಯಕಿರಣ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ನಝೀರ್ ಕೋೈಲ, ಕೋಶಾಧಿಕಾರಿಯಾಗಿ ವಾರ್ತಾಭಾರತಿ ಪತ್ರಿಕೆಯ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಎಂಟು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು. ಸಮಿತಿ ಸದಸ್ಯರಾಗಿ ಪ್ರಜಾವಾಣಿ ವರದಿಗಾರ ಶಶಿಧರ ರೈ ಕುತ್ಯಾಳ, ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಡಿ, ಸುದ್ದಿ ಬಿಡುಗಡೆ ವರದಿಗಾರರಾದ ಶೇಖ್ ಜೈನುದ್ದೀನ್ ಹಾಗೂ ಲೋಕೇಶ್ ಬನ್ನೂರು, ನಮ್ಮ ಟಿವಿ ವರದಿಗಾರ ಕೃಷ್ಣಪ್ರಸಾದ್, ಸ್ಪಂದನ ಟಿವಿ ವರದಿಗಾರ ಉಮಾಶಂಕರ್, ಹೊಸದಿಗಂತ ವರದಿಗಾರ ರಾಜೇಶ್ ಪಟ್ಟೆ ಮತ್ತು ಬಿಟಿವಿ ವರದಿಗಾರ ಶರತ್ ಆಯ್ಕೆಯಾದರು.


ಆಡಳಿತ ಮಂಡಳಿಯ ಎಲ್ಲ 15 ಸದಸ್ಯರಿಗೆ ಚುನಾವಣಾಧಿಕಾರಿಗಳು ಪ್ರಮಾಣಪತ್ರ ನೀಡಿ ಅಭಿನಂದಿಸಿದರು. ಸಂಘದ ಸಂಪೂರ್ಣ ತಂಡವನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪುತ್ತೂರಿನ ಪತ್ರಕರ್ತರು ಸಮಾಜಕ್ಕೆ ಉತ್ತಮ ನಿದರ್ಶನ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು. ನಿರ್ಗಮನ ಅಧ್ಯಕ್ಷ ಸಿದ್ದಿಕ್ ನೀರಾಜೆ ಹಾಗೂ ನಿರ್ಗಮನ ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ಅವರು ನೂತನ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ನೂತನ ಅಧ್ಯಕ್ಷ ಸುಧಾಕರ ಸುವರ್ಣ ಮತ್ತು ಪ್ರಧಾನ ಕಾರ್ಯದರ್ಶಿ ಸಿ. ಶೇ. ಕಜೆಮಾರ್ ಅವರು ಹೊಸ ತಂಡದ ಪರವಾಗಿ ಎಲ್ಲ ಮತದಾರ ಸದಸ್ಯರು ಹಾಗೂ ಆಯ್ಕೆಯಾದ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.


