ತರಕಾರಿಗಳ ದರ ಪೈಕಿ ನುಗ್ಗೆಕಾಯಿ ಬೆಲೆ ಸಾಮಾನ್ಯವಾಗಿ ಕಡಿಮೆಯೇ ಇರುತಿತ್ತು. ಆದರೆ, ಇತ್ತೀಚೆಗೆ ನುಗ್ಗೆಕಾಯಿ ಚಿಕನ್‌ ಹಾಗೂ ಮಟನ್‌ಗಿಂತಲೂ ದುಬಾರಿಯಾಗುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಇದರಿಂದ ಗ್ರಾಹಕರು “ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ” ಎನುತ್ತಿದ್ದಾರೆ.

ಸದ್ಯ ತರಕಾರಿ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿಗೆ ಭಾರೀ ಡಿಮ್ಯಾಂಡ್‌ ಹೆಚ್ಚಾಗಿದ್ದು, ಬೆಲೆ ಕೆ.ಜಿ.ಗೆ 500 ರೂಪಾಯಿಯಿಂದ 700 ರೂಪಾಯಿವರೆಗೆ ಇದೆ ಎಂದು ತಿಳಿದುಬಂದಿದೆ. ಈ ದಿಢೀರ್‌ ಬೆಲೆ ಏರಿಕೆಗೆ ಅಸಲಿ ಕಾರಣವೇನು ಎಂದು ತರಕಾರಿ ವ್ಯಾಪಾರಿಗಳು ಹೇಳಿದ್ದಾರೆ.

ಉಳಿದ ತರಕಾರಿ ಬೆಲೆಗಳು ಕಡಿಮೆಯೇ ಇದೆ. ಆದರೆ ಚಳಿಗಾಲ ಆದ ಕಾರಣ ನುಗ್ಗೆಕಾಯಿಗೆ ಸ್ವಲ್ಪ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ದರಗಳು ಏರಿಕೆ ಕಂಡಿವೆ. ಕಳೆದ ಮೂರು ದಿನಗಳಿಂದ ನುಗ್ಗೆಕಾಯಿ ದರವು ಏರುತ್ತಿದೆ. ಆರಂಭಿಕ ಬೆಲೆಯೇ ಕೆ.ಜಿ.ಗೆ 500 ರೂಪಾಯಿ ಇದೆ. ರೈತರೇ ನಮಗೆ 400 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಹೀಗಾಗಿ ನಾವು ಲಾಭ ಇಟ್ಟುಕೊಂಡು ಈ ದರಕ್ಕೆ ಮಾರಲೇಬೇಕಾಗಿದೆ ಎಂದು ತರಕಾರಿ ವ್ಯಾಪಾರಿಗಳು ವಿವರಿಸಿದ್ದಾರೆ.

ನುಗ್ಗೆಕಾಯಿಯನ್ನು ಬೇರೆ ತರಕಾರಿಯಂತೆ ಎಲ್ಲೆಡೆ ರೈತರು ಬೆಳೆಯುವುದಿಲ್ಲ. ಕೆಲವೆಡೆ ಮಾತ್ರವೇ ಇದನ್ನು ಬೆಳೆಯುವುದರಿಂದ ದರಗಳು ಏರುತ್ತವೆ. ಚಳಿಗಾಲದಲ್ಲಿ ಇದರ ಇಳುವರಿಯೂ ಕಡಿಮೆ. ಇದರಿಂದಾಗಿ ರಾಜ್ಯದಲ್ಲಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ. ನುಗ್ಗೆಕಾಯಿ ಬೆಲೆ ಮಟನ್ ಬೆಲೆಗೆ ಸರಿಸಮನಾಗಿದೆ. ಈ ಹಿಂದೆ ಕೆ.ಜಿಗೆ ಹೆಚ್ಚೆಂದರೆ 150-200 ರೂಪಾಯಿ ಮಾತ್ರ ಇರುತ್ತಿತ್ತು.

ಇಳುವರಿ ಕಡಿಮೆ

ಈಗ ನುಗ್ಗೆಕಾಯಿ ಈಗ 500-700 ರೂಪಾಯಿಗೆ ತಲುಪಿದೆ. ತಮಿಳುನಾಡಿನಲ್ಲಿ ಬೆಳೆ ತಡವಾಗಿರುವುದು ಮತ್ತು ಇತ್ತೀಚಿನ ಚಂಡಮಾರುತದ ಪರಿಣಾಮದಿಂದ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿರುವುದು ದರ ಏರಿಕೆ ಪ್ರಮುಖ ಕಾರಣ ಎನ್ನಲಾಗಿದೆ. ನುಗ್ಗೆಕಾಯಿ ದುಬಾರಿಯಾಗಿರುವುದರಿಂದ ಕೆಲ ಮಾರಾಟಗಾರರು ಇದನ್ನು ತಂದು ಮಾರಾಟ ದುಬಾರಿ ದರಕ್ಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಎರಡು ನುಗ್ಗೇಕಾಯಿ ಬೆಲೆಯೇ 100 ರೂಪಾಯಿ ತಲುಪಿದೆ. ಈ ಹಿಂದೆ ಟೊಮೊಟೋ, ಈರುಳ್ಳಿ ದರಗಳು ಹೆಚ್ಚಾಗಿ ಬೆಲೆ ಏರಿಕೆ ಸಾಲಿನಲ್ಲಿರುತ್ತಿದ್ದವು. ಆದರೆ ಈಗ ನುಗ್ಗೆಕಾಯಿ ದರ ನೋಡಿ ಜನ ಹೆದರುವಂತಾಗಿದೆ. ಪ್ರತಿದಿನವೂ ಸುಮಾರು 100 ಟನ್ ನುಗ್ಗೆಕಾಯಿ ಮಾರುಕಟ್ಟೆಗಳಿಗೆ ಪೂರೈಕೆ ಆಗುತ್ತಿತ್ತು. ಆದರೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ನುಗ್ಗೆಕಾಯಿ ಬೆಳೆ ಭಾರೀ ಹೊಡೆತ ತಿಂದಿದೆ. ಇದರಿಂದ ಮಾರುಕಟ್ಟೆಗಳಿಗೆ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿದೆ.

Leave a Reply

Your email address will not be published. Required fields are marked *