ಬೆಂಗಳೂರು:
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಳವಾಗುತ್ತಿರುವ ಪರಿಣಾಮ ನಾನ್ವೆಜ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಹವಾಮಾನ ವೈಪರಿತ್ಯ, ಹೆಚ್ಚುತ್ತಿರುವ ಚಳಿ ಹಾಗೂ ವರ್ಷದ ಅಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಕೋಳಿ ಹಾಗೂ ಕುರಿ ಮಾಂಸದ ಬೇಡಿಕೆ ಗಣನೀಯವಾಗಿ ಹೆಚ್ಚಳಗೊಂಡಿದೆ.
ಚಳಿಗಾಲದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಕುರಿ ಮತ್ತು ಕೋಳಿ ಉತ್ಪಾದನೆ ಇಳಿಕೆಯಾಗುತ್ತದೆ. ಇದೇ ಸಂದರ್ಭದಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮಟನ್ ಬೆಲೆಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಇತ್ತೀಚೆಗೆ ಮೊಟ್ಟೆ ಬೆಲೆ ವಿಚಾರದಲ್ಲಿ ಉಂಟಾದ ಗೊಂದಲವೂ ಸಹ ಮಾಂಸ ಮಾರಾಟ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.




ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮಟನ್ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಮುಂದಿನ ಒಂದು ವಾರದಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೋಳಿ ಮಾಂಸದ ಬೆಲೆ ಈಗಾಗಲೇ ಪ್ರತಿ ಕೆಜಿಗೆ ರೂ.290ರ ಸಮೀಪ ತಲುಪಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ರೂ.300 ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದ ಬಳಿಕ ಇದೀಗ ಕೋಳಿ ಹಾಗೂ ಕುರಿ ಮಾಂಸದ ಬೆಲೆಗಳಲ್ಲೂ ಏರಿಕೆ ಕಂಡುಬಂದಿದ್ದು, ಗ್ರಾಹಕರು ಬೆಲೆ ಏರಿಕೆಯ ಹೊಡೆತ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಹಬ್ಬದ ಸೀಸನ್ ಮುಗಿಯುವವರೆಗೂ ಮಾಂಸದ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಡಿಮೆ ಎನ್ನಲಾಗಿದೆ.




