ಪುತ್ತೂರಿನ ಕಂಬಳಕ್ಕೆ ಐತಿಹಾಸಿಕ ಮಹತ್ವ – ವಿನಯ ಕುಮಾರ್ ಸೊರಕೆ

ಪುತ್ತೂರು: ರೈತರ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳಕ್ಕೆ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಭಾಗಗಳಲ್ಲಿ ಅಪಾರ ಸಹಕಾರ ದೊರೆಯುತ್ತಿದ್ದು, ಪುತ್ತೂರಿನ ಕಂಬಳವು ಐತಿಹಾಸಿಕ ಮಹತ್ವ ಹೊಂದಿದೆ ಎಂದು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರು, ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಹೇಳಿದರು.

ಪುತ್ತೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆದ ೩೩ನೇ ವರ್ಷದ ಕೋಟಿ ಚೆನ್ನಯ್ಯ ಹೊನಲು ಬೆಳಕಿನ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುತ್ತೂರು ಕಂಬಳದಲ್ಲಿ ಅಳವಡಿಸಿಕೊಂಡಿರುವ ಕೆಸರುಗದ್ದೆ ಓಟದ ಸ್ಪರ್ಧೆ, ಕಂಬಳದ ಓಟಗಾರರಿಗೆ ವಿಶೇಷ ತರಬೇತಿಯಾಗಿ ರೂಪುಗೊಂಡಿದೆ. ವರ್ಷದಿಂದ ವರ್ಷಕ್ಕೆ ಪುತ್ತೂರು ಕಂಬಳಕ್ಕೆ ಆಗಮಿಸುವ ಜನಸಾಗರ ಹೆಚ್ಚುತ್ತಿದ್ದು, ಈ ಕಂಬಳ ಕೂಟದ ಶಕ್ತಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಂಬಳದಿಂದಲೇ ನಮಗೆ ಕೀರ್ತಿ – ಅಶೋಕ್ ರೈ
ಪುತ್ತೂರು: “ನಮ್ಮಿಂದಾಗಿ ಕಂಬಳಕ್ಕೆ ಹೆಸರು ಬಂದಿದೆ ಎಂದುಕೊಂಡಿದ್ದೆವು. ಆದರೆ ವಾಸ್ತವದಲ್ಲಿ ಕಂಬಳದಿಂದಲೇ ನಮಗೆ ಕೀರ್ತಿ ಮತ್ತು ಗೌರವ ಲಭಿಸಿದೆ” ಎಂದು ಶಾಸಕ ಅಶೋಕ್ ರೈ ಹೇಳಿದರು.
ಪ್ರಾಣಿ ದಯಾ ಸಂಘಗಳ ವಿರೋಧಗಳ ನಡುವೆಯೂ ದೈವದ ಅನುಗ್ರಹ ಮತ್ತು ಸರ್ಕಾರದ ಸಹಕಾರದಿಂದ ಕಂಬಳ ಯಶಸ್ವಿಯಾಗಿ ನಡೆದಿರುವುದು ಸಂತಸದ ಸಂಗತಿ ಎಂದರು. ಕಂಬಳದಂತೆಯೇ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯಾದ ಕೋಳಿ ಅಂಕಕ್ಕೂ (ಜೂಜು ರಹಿತವಾಗಿ) ಅವಕಾಶ ನೀಡಬೇಕು, ಕುಂಠಿತವಾಗಿರುವ ಕುಮ್ಕಿ ಹಕ್ಕು, ತುಳು ಭಾಷೆಯನ್ನು ಹೆಚ್ಚುವರಿ ಭಾಷೆಗೆ ಸೇರಿಸುವಂತೆ ಜಿಲ್ಲೆಯ ೧೩ ಶಾಸಕರು ಒಗ್ಗಟ್ಟಾಗಿ ನಿಂತರೆ ಜಿಲ್ಲೆಗೆ ಪೂರಕವಾದ ಕಾನೂನು ರೂಪಿಸಬಹುದು ಎಂದು ಹೇಳಿದರು. ಜಿಲ್ಲೆಯ ವಿಚಾರದಲ್ಲಿ ಪಕ್ಷಭೇದ ಮರೆತು ಕೆಲಸ ಮಾಡಬೇಕೆಂದರು.

‘ಬಿರ್ದ್ದ ಕಂಬಳ’ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆ
ತುಳು ಚಲನಚಿತ್ರ ‘ಬಿರ್ದ್ದ ಕಂಬಳ’ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ತಾವು ನಿರ್ದೇಶಿಸಿದ ‘ಬಿರ್ದ್ದ ಕಂಬಳ’ ಹಾಗೂ ‘ವೀರ ಕಂಬಳ’ ಚಿತ್ರಗಳು ಸಂಪೂರ್ಣವಾಗಿ ಕಂಬಳ ಆಧಾರಿತ ಕಥೆಗಳಾಗಿದ್ದು, ‘ಬಿರ್ದ್ದ ಕಂಬಳ’ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದರು.
ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ‘ಡೆಡ್ಲಿ ಸೋಮ’ ಚಿತ್ರದ ನಟ ಆದಿತ್ಯ, ‘ಪಟ್ಟೆ ಹುಲಿ’ ಚಿತ್ರದ ನಟ ಶ್ರೇಯಸ್ ಅವರು ಕೂಡ ಮಾತನಾಡಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ನರೇಂದ್ರ ರೈ ದೇರ್ಲ, ಪದ್ಮನಾಭ ಶೆಟ್ಟಿ ರೆಂಜಾಳಗುತ್ತು, ಚಂದ್ರಶೇಖರ ಕೆ.ಎಸ್., ಕುಮಾರ್ ಪೆರ್ನಾಜೆ, ಅಬೂಬಕ್ಕರ್ ಮುಲಾರ್, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ರಾಜಲಕ್ಷ್ಮೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಂಬಳದ ಗದ್ದೆಯಲ್ಲಿ ಕೋಣಗಳ ಸ್ಪರ್ಧೆಯೊಂದಿಗೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಹಾಗೂ ರಿಲೇ ಓಟ ಸ್ಪರ್ಧೆಗಳು ನಡೆಯಿತು.
ಕೆಸರುಗದ್ದೆ ಓಟದಲ್ಲಿ ಅಂಕಿತ್ ಜೆ.ಜೆ. (ಉಡುಪಿ) ಪ್ರಥಮ, ಧನುಷ್ (ಉಡುಪಿ) ದ್ವಿತೀಯ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಮಂಜು ತೃತೀಯ ಸ್ಥಾನ ಪಡೆದರು.
ರಿಲೇ ಓಟದಲ್ಲಿ ೮ ತಂಡಗಳು ಭಾಗವಹಿಸಿದ್ದು, ಉಡುಪಿ ಅಥ್ಲೆಟಿಕ್ ಅಸೋಸಿಯೇಶನ್ ಪ್ರಥಮ, ಮಂಗಳೂರು ಎಕ್ಸಲೆನ್ಸ್ ಅಥ್ಲೆಟಿಕ್ ತಂಡ ದ್ವಿತೀಯ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿತು. ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಂಚಾಲಕ ವಸಂತ ಕುಮಾರ್ ರೈ, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಜಿ ಸಚಿವ ಬಿ. ರಮಾನಾಥ ರೈ, ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಗೌರವಾಧ್ಯಕ್ಷೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೋಶಾಧಿಕಾರಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ತೀರ್ಪುಗಾರ ಗುಣಪಾಲ ಕಡಂಬ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಸಶೆನ್ಸ್ ನ್ಯಾಯಾಧೀಶೆ ಸರಿತಾ, ನ್ಯಾಯಾಧೀಶೆ ಪ್ರಕೃತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *