ಉಜಿರೆ: ಧರ್ಮಸ್ಥಳ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊಫೆಸರ್ ಪ್ರಭಾಕರ ಅವರು ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರವು ಡಿಸೆಂಬರ್ 25 (ಇಂದು) ಸಂಜೆ 6 ಗಂಟೆಗೆ ಜೈನ ಧರ್ಮದ ವಿಧಿ ವಿಧಾನಗಳಂತೆ ನೆರವೇರಲಿದೆ.
ಅಂತ್ಯಸಂಸ್ಕಾರವು ಉಜಿರೆಯಲ್ಲಿರುವ ಅವರ ನಿವಾಸದ ಜಮೀನಿನ ವಠಾರದಲ್ಲಿ ನಡೆಯಲಿದೆ. ಪ್ರೊ. ಪ್ರಭಾಕರ ಅವರ ಮಗಳು ಶರ್ಮಿಳ ಹಾಗೂ ಅಳಿಯ ನರೇಂದ್ರ ಲಂಡನ್‌ನಲ್ಲಿ ಇರುವ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಡಿಸೆಂಬರ್ 25ರ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.





ಡಿಸೆಂಬರ್ 24ರಂದು ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಥಿವ ಶರೀರಕ್ಕೆ ಸಾರ್ವಜನಿಕರ ಅಂತಿಮ ದರ್ಶನದ ಅವಕಾಶ ಕಲ್ಪಿಸಲಾಗಿದ್ದು, ನಂತರ ಪಾರ್ಥಿವ ಶರೀರವನ್ನು ಎಸ್‌ಡಿಎಂ ಆಸ್ಪತ್ರೆಗೆ ಶವಗಾರಕ್ಕೆ ರವಾನೆ ಮಾಡಲಾಗಿತ್ತು. ಡಿಸೆಂಬರ್ 25ರ ಸಂಜೆ 5 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ.
ಪ್ರೊ. ಪ್ರಭಾಕರ ಅವರ ನಿವಾಸಕ್ಕೆ ಧರ್ಮಸ್ಥಳದಿಂದ ಡಾ. ಹರ್ಷೇಂದ್ರ ಕುಮಾರ್ ಹಾಗೂ ಹೇಮಾವತಿ ಹೆಗಡೆ ಸೇರಿದಂತೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.




