ಪತ್ರಿಕೋದ್ಯಮ ವಲಯಕ್ಕೆ ಭಾರೀ ನಷ್ಟ
ಬೆಂಗಳೂರು, ಡಿ.20: ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡಬೊಮಯ್ಯ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ–ಚಿಕ್ಕಮ್ಮ ದಂಪತಿಯ ಪುತ್ರರಾಗಿದ್ದ ದೊಡ್ಡಬೊಮಯ್ಯ, ಪತ್ರಿಕೋದ್ಯಮದಲ್ಲಿ ಸುಮಾರು 30 ವರ್ಷಗಳ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಸಂಜೆವಾಣಿ ಹಾಗೂ ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಸರಳ ಸ್ವಭಾವ ಮತ್ತು ಆತ್ಮೀಯತೆಯಿಂದ ಅಪಾರ ಬಳಗವನ್ನು ಹೊಂದಿದ್ದವರು.




ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ತೆರಳಿದ್ದ ಅವರು, ಇಂದು ಬೆಳಿಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಬಾಗಲೂರಿನಲ್ಲಿರುವ ತಮ್ಮ ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ ಸಂದರ್ಭ ತೀವ್ರ ಹೃದಯಾಘಾತ ಸಂಭವಿಸಿದೆ. ಸಹಪ್ರಯಾಣಿಕರು ಉಪಚಾರ ನೀಡಿದರೂ, ಬಸ್‌ನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ದೊಡ್ಡಬೊಮಯ್ಯ ಅವರು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿಯೂ, ಪ್ರೆಸ್ ಕ್ಲಬ್ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಸಂಘದ ಪದಾಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ. ವಿಠಲಮೂರ್ತಿ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಪತ್ರಕರ್ತರ ಅಗಲಿಕೆಯಿಂದ ಪತ್ರಿಕೋದ್ಯಮ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ.




