ಪುತ್ತೂರು: ನಗರದ ಹೃದಯಭಾಗದಲ್ಲಿರುವ ಕೂರ್ನಡ್ಕ ಪ್ರದೇಶದ ಪ್ರಮುಖ ರಸ್ತೆಯಲ್ಲಿದ್ದ ಬೃಹತ್ ಹೊಂಡವೊಂದನ್ನು ಸಾರ್ವಜನಿಕ ಸುರಕ್ಷತೆಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಮುಚ್ಚುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.





ಕೂರ್ನಡ್ಕದ ರಸ್ತೆಯ ಗುಂಡಿಯನ್ನು ಮುಚ್ಚುವಂತೆ ಕಳೆದ ಮೂರು ತಿಂಗಳಿಂದ ಸ್ಥಳೀಯರು ಹಲವು ಬಾರಿ ಪುತ್ತೂರು ನಗರಸಭೆ, ಕೌನ್ಸಿಲರ್‌ಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಮಧ್ಯರಾತ್ರಿ ದಿಢೀರ್ ಪ್ರತಿಭಟನೆಗೂ ಮುಂದಾಗಿದ್ದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ಹಕೀಮ್ ಕೂರ್ನಡ್ಕ, ಸಿರಾಜ್ A.K., ಮತ್ತು ಯಹಿಯಾ KH. ಕೂರ್ನಡ್ಕ ತಮ್ಮದೇ ವೆಚ್ಚದಲ್ಲಿ ಸಾಮಗ್ರಿ ಖರೀದಿಸಿ, ಸ್ವತಃ ಕಾಂಕ್ರೀಟ್ ಕಲಸಿ ಹೊಂಡವನ್ನು ಮುಚ್ಚುವ ಮೂಲಕ ಸಾರ್ವಜನಿಕ ಹಿತಕ್ಕಾಗಿ ನಿದರ್ಶನೀಯ ಕಾರ್ಯ ನೆರವೇರಿಸಿದರು.
ಪ್ರಾದೇಶಿಕ ನಾಗರಿಕರ ಸುರಕ್ಷತೆಗಾಗಿ ಕೈಗೊಂಡ ಈ ಸೇವಾಭಾವಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, “ಇವರು ಮಾಡಿದ ಕೆಲಸ ನಿಜಕ್ಕೂ ಪ್ರಶಂಸನೀಯ, ಸಾರ್ವಜನಿಕ ಹಿತವನ್ನು ಮೊದಲ ಸ್ಥಾನಕ್ಕೆ ಇಟ್ಟಿದ್ದಾರೆ” ಎಂದು ಅನೇಕರು ಶ್ಲಾಘಿಸಿದ್ದಾರೆ.



